ಸ್ವಾಮಿಗಳ ಕೈಯಿಂದ ಬಸವಣ್ಣರನ್ನು ಬಿಡಿಸಿಕೊಳ್ಳಬೇಕಿದೆ ನಾವು!

4 years ago

ಸ್ವಾಮಿಗಳ ಕೈಯಿಂದ ಬಸವಣ್ಣರನ್ನು ಬಿಡಿಸಿಕೊಳ್ಳಬೇಕಿದೆ ನಾವು!
ಅಷ್ಟಕ್ಕೂ ಷಡ್ಯಂತ್ರ, ಕುತಂತ್ರ ಅಂದರೆ ಏನು!?

ನಾವು ಮಾಡಿರೋ ತಪ್ಪಿನ ಪುರಾವೆ ಮತ್ತೊಬ್ಬರ ಕೈಗೆ ಸಿಕ್ಕಾಗ ಅವರು ‘ತಮಗಾಗಿ’ ಮಾಡುವುದೇ ಬ್ಲ್ಯಾಕ್‌ಮೇಲ್ ಅಥವಾ ಷಡ್ಯಂತ್ರ. ಸುಮ್ನೇ ಅದು ಬಿಟ್ಟು ಷಡ್ಯಂತ್ರ ಷಡ್ಯಂತ್ರ ಅಂತ ಜಪ ಮಾಡಬೇಡಿ. ಇನ್ನು ಏನೇ ಇದ್ದರೂ ಸಂತ್ರಸ್ತರು ಸಂತ್ರಸ್ತರೇ. ಇದೇ ಮೊದಲು ಇವರ ವಿರುದ್ಧ ಹೀಗೆ ಆರೋಪ ಬಂದಿಲ್ಲ ಅಂತ ಗೊತ್ತಾಗುತ್ತಿದೆ. ಹರಿದಾಡುತ್ತಿರುವ ಆಡಿಯೋ, ಹಲವರ ಮಾತುಗಳು ಇದಕ್ಕೆ ಪುಷ್ಠಿ ನೀಡಿವೆ. ಅವರೇ ಹೇಳುವಂತೆ ಇಷ್ಟು ದಿನ “ಒಳಗಿತ್ತು”, ಈಗ ಹೊರಗೆ ಬಂದಿದೆ. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ. ಇನ್ನು ಸ್ಥಾನ-ಮಾನ, ಸಮುದಾಯ ಆಮೇಲೆ. ಯಾರೋ ಒಬ್ಬ ‘ವ್ಯಕ್ತಿ’ಯಾಗಿ ತಾನು ಎಸಗಿದ್ದಾನೆ ಎನ್ನಲಾದ ಅಪರಾಧದ ಆರೋಪ ಮುಖ್ಯವಾಗಬೇಕು. ಬೇರೆಲ್ಲ ಗೌಣ.
ಮುನುಷ್ಯರಾದ ನಮಗೆ ಪುಟ್ಟ ಮಕ್ಕಳ ವೇದನೆ, ತ್ರಾಸು ಹೃದಯವನ್ನು ಕಲಕಬೇಕು. ನನಗೆ ಯಾರ ಮೇಲೂ ರಾಗ-ದ್ವೇಷವಿಲ್ಲ. ನಾನೂ ಇವರ ಬಗ್ಗೆ ಬಸವಾದಿ ಶರಣರ ಕಾರಣಕ್ಕೆ ಗೌರವ ಇಟ್ಟುಕೊಂಡವನೇ. ಆದರೆ; ಈಗ ಹರಿದಾಡುತ್ತಿರುವ ಆಡೀಯೊಗಳು, ಅನೇಕರು ಇದನ್ನು ಪುಷ್ಠೀಕರಿಸಿದ್ದೆಲ್ಲ ಬೇರೆಯದೇ ಹಾದಿ ಹಿಡಿಸಿವೆ. ಎಲ್ಲ ಶೇಖರಿಸಿ ಈ ಮಾತು ಹೇಳುತ್ತಿರುವೆ. ಎಲ್ಲೆಡೆಯಿಂದ ಬರುತ್ತಿರುವ ಮಾಹಿತಿಗಳನ್ನು ಕೇಳಿ ದಿಗ್ಭ್ರಮೆಗೊಂಡಿದ್ದೇನೆ. ನನಗೆ ಈ ಮೊದಲು ಏನೂ ಗೊತ್ತಿರಲಿಲ್ಲ. ಇವರಲ್ಲದೆ ಅನೇಕರ ಬಗ್ಗೆ ಈಗ ಕೇಳಿ, ತಿಳಿದು ಗಾಬರಿಯಾಗಿದೆ. ಪಾಪಾಸುಕಳ್ಳಿಯಂತೆ ಹಲವರ ಪಾಪಕೂಪ ಹಬ್ಬಿದೆ. ಬಸವಾದಿ ಶರಣರ ವಿಚಾರ ತಿಳಿಸುತ್ತ ಸಾಧನೆ ಮಾಡಬೇಕೆಂದಿದ್ದ ಅನೇಕ ಹೆಣ್ಣುಮಕ್ಕಳ ಮಾತು ಕೇಳಿ ನಾನು ವಿಚಲಿತನಾಗಿದ್ದೇನೆ. ಒಳ ಸುಳಿಯಲ್ಲಿ ಭಯಂಕರ ಸತ್ಯಗಳು ಅಡಗಿವೆ. ಭಕ್ತ ವಲಯ ಇನ್ನೂ ಅದೇ ಮುಗ್ಧತೆಯಲ್ಲೇ ಇದೆ. ನನ್ನಂತವನಿಗೇ ಏನೂ ಗೊತ್ತಿರಲಿಲ್ಲ. ಜತೇಲಿದ್ದ ದೊಡ್ಡವರ ಬಗ್ಗೆ ನಾನು ಇಷ್ಟು ದಿನ ಏನೂ ಕೆದಕಲೂ ಹೋಗಿರಲಿಲ್ಲ. ನಮ್ಮ ತಲೇಲಿ ಒಳ್ಳೆಯ ವಿಚಾರ ಮಾತ್ರ ಇದ್ದವು. ಆದರೆ ಈಗ ನಮಗೆ ಯಾವ ಸ್ವಾಮಿಗಳ ಸಹವಾಸವೇ ಬೇಡಪ್ಪ ಅಂತೆನಿಸಿದೆ. ನಮಗೆ ಬಸವಣ್ಣ ಮಾತ್ರ ಸಾಕು. ಇವರೆಲ್ಲರಿಂದ ನಾವು ಬಸವಣ್ಣನವರನ್ನು ಬಿಡಿಸಿಕೊಳ್ಳಬೇಕಿದೆ.

ಬಸವಣ್ಣನ ಹಾದಿ ದಮನಿತರ ಪರದ್ದು. ಅದರ ಪರವೇ ನಾವಿರಬೇಕು. ಅದು ಬಿಟ್ಟು ಯಡಿಯೂರಪ್ಪ ಅವರ ಹಾಗೆ ಮಾತಾಡೋದಲ್ಲ. ಅವರ ಬಗ್ಗೆ ಇದ್ದ ಒಂದಷ್ಟು ಗೌರವವೂ ಕಡಿಮೆಯಾಯಿತು ಈಗ. ನಾವು ಯಡಿಯೂರಪ್ಪ ಇನ್ನುಳಿದವರಂತೆ ಮತ ಬೇಟೆಯಾಡುವ ರಾಜಾ ಹುಲಿಗಳಾಗೋದು ಬೇಡ. ಸಹಜ ಜೀವಪರ ಸಂವೇದನೆಗಳಿರುವ ಸಾದಾ ಮನುಷ್ಯರಾಗೋಣ, ಸಾಕು!
– ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ

Leave a Reply