ಶಿಗ್ಗಾವಿ ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಆಕಾಂಕ್ಷಿಗಳ ಪೈಪೋಟಿ

2 years ago

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಶಿಗ್ಗಾವಿ – ಸವಣೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಣಕ್ಕೆ ರಂಗೇರತೊಡಗಿದೆ.

ಈ ಕ್ಷೇತ್ರಕ್ಕೆ ಇನ್ನೂ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಲ್ಲ. ಆದರೂ ಕ್ಷೇತ್ರದಲ್ಲಿ ಚುನಾವಣೆಯ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಹಲವು ಸಮೀಕ್ಷೆಗಳು ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಆಡಳಿತ ರೂಡ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬುದಾಗಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಭಾರಿ ಪೈಪೋಟಿ ಉಂಟಾಗಿದೆ.



ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ  ಪುತ್ರ ಸಿ.ಎಂ.ಫಯಾಜ್ ಅವರು ಕ್ಷೇತ್ರದಲ್ಲೆಡೆ ಸಂಚರಿಸುತ್ತಾ ಕಾರ್ಯಕರ್ತರೊಂದಿಗೆ ಕೂಡಿಕೊಂಡು ಹಲವು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಮತದಾರರ ಮನೆಗೆಲ್ಲಲು ಕಸರತ್ತು ನಡೆಸಿದ್ದಾರೆ. ಫಯಾಜ್ ಅವರ ಈ ಕಾರ್ಯ ಶೈಲಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬರುತ್ತಿದೆ.

ಇಂತಹ ವಾತಾವರಣ ಇರುವುದನ್ನು ಕೇಳಿ ಕಂಡು ತಿಳಿದುಕೊಂಡ ಸ್ವಾಮೀಜಿಯೊಬ್ಬರು ಇದೀಗ ಕಾಂಗ್ರೆಸ್ಸಿನಿಂದ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡರ ಮೇಲೆ ರಾಜ್ಯದ ಹಲವು ಮಠಾಧೀಶರು ಒತ್ತಡ ಹಾಕುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ನೀಡುವಂತೆ ಕೋರಿ ಕೆಲ ಭಕ್ತರು ಈಗಾಗಲೇ ಜಿಲ್ಲಾ ಕಾಂಗ್ರೆಸ್ಸಿಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ವಿನಯ್ ಕುಲಕರ್ಣಿ ಸೇರಿದಂತೆ ಹಲವು ಮುಖಂಡರನ್ನು ಇತ್ತೀಚೆಗೆ ಭೇಟಿಯಾಗಿದ್ದ ಕೆಲ ಮಠಾಧೀಶರು, ಹಿಂದೂಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಿರುವ ಮಾತಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಸ್ವಾಮೀಜಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಹಿಂದೂಗಳ ಪರವಿದೆ ಎಂಬುದನ್ನು ಸಾಬೀತು ಮಾಡಿ ಎಂದು ಮನವಿ ಮಾಡಿದ್ದಾರೆ.

ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಚನ್ನಬಸವೇಶ್ವರ ಸ್ವಾಮೀಜಿ, ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ನೀಡಿದರೆ, ಸ್ಪರ್ಧಿಸಲು ಸಿದ್ಧನಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ 100ಕ್ಕೂ ಹೆಚ್ಚು ಮಠಾಧೀಶರು, ನನ್ನ ಪರವಾಗಿ ಟಿಕೆಟ್ ಕೇಳುತ್ತಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುವ ಇಚ್ಛೆಯಿಲ್ಲ. ತಟಸ್ಥವಾಗಿರುತ್ತೇನೆ ಎಂದರು.

Leave a Reply