ಶರಣ ಸಾಹಿತ್ಯ ಪರಿಷತ್‍ನ ಸಂಸ್ಥಾಪನಾ ದಿನಾಚರಣೆ ಹಾಗೂ ಮಕ್ಕಳಿಗೆ ವಚನಗಾಯನ ಸ್ಪರ್ಧೆ

5 years ago

ಬೆಂಗಳೂರು: ಸಾಹಿತ್ಯ ಸಂಸ್ಕøತಿ ವೇದಿಕೆ, ಬೆಂಗಳೂರು ವತಿಯಿಂದ ನಗರಕ್ಕೆ ಹೊಂದಿಕೊಂಡಿರುವ ಅಗರ ಗ್ರಾಮದಲ್ಲಿ ನಿರಂತರವಾಗಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕರು, ಮಕ್ಕಳು ಹಾಗೂ ಮಹಿಳೆಯರಿಗಾಗಿ ನಡೆಸಲಾಗುತ್ತಿದೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ಶ್ರೀ ಶ್ರೀಶ್ರೀಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಜಿಯವರ ಸಂಸ್ಮರಣಾ ದಿನಾಚರಣೆಯನ್ನು ಬೆಂಗಳೂರಿನ ಸಾಹಿತ್ಯರತ್ನ ಆರ್.ಸದಾಶಿವಯ್ಯ ಕಲಾ ಮಂಟಪ ಅಗರದಲ್ಲಿ ಶಾಲಾ ಮಕ್ಕಳಿಗೆ ವಚನ ಗಾಯನ, ವಚನ ಪಟಣ ಸ್ಪರ್ಧೆಗಳನ್ನುಏರ್ಪಡಿಸುವ ಮೂಲಕ ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಂಗತಜ್ಞರು ಹಾಗೂ ಹೆಸರಾಂತ ಹಿರಿಯ ಕಲಾವಿದರಾದ ಡಾ.ಎ.ಆರ್.ಗೋವಿಂದಸ್ವಾಮಿ, ಶಿವಾಚಾರಣಿ ಹಾಗೂ ಶರಣ ಸಾಹಿತ್ಯ ಪರಿಷತ್, ಬಸವನಗುಡಿ ಅಧ್ಯಕ್ಷೆ ಉಷಾಕಿರಣ್, ಸಾಹಿತಿ ಹಾಗೂ ವಕೀಲ ದಿಬ್ಬೂರು ಗಿರೀಶ್, ಕವಿ ಹಾರಗದ್ದೆ ಸತ್ಯನಾರಾಯಣ, ಸಾಹಿತ್ಯ ಸಂಸ್ಕøತಿ ವೇದಿಕೆ ಅಧ್ಯಕ್ಷ ಜರಗನ ಹಳ್ಳಿ ಸದಾಶಿವಯ್ಯ ಮುಂತಾದವರು ಉಪಸ್ಥಿತಿರಿದ್ದರು.

ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, 12ನೇ ಶತಮಾನದಲ್ಲಿ ನೂರಾರು ಶರಣರು ಸಮಾಜಕ್ಕೆ ಪೂರಕವಾದ, ಪ್ರಗತಿಪರವಾದ ವಚನಗಳನ್ನು ಕೊಟ್ಟಿದ್ದಾರೆ ನಮ್ಮಲ್ಲಿ ಸುಮಾರು 86 ವಚನಕಾರರು ದಾಖಲಾಗಿದ್ದಾರೆ. ಎಲ್ಲಾ ವಚನಕಾರರ ಆಶಯ ಕಾಯಕಧರ್ಮವನ್ನು, ಸಮಾನತೆಯನ್ನು ಹಾಗೂ ಏಕತೆಯನ್ನು ಸಾರುವುದಾಗಿದೆ ಎಂದರು.

ಬಸವಣ್ಣನವರು ಕಾಯಕವೇ ಕೈಲಾಸ, ಎನ್ನಕಾಲೆಕಂಬ ದೇಹವೇದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದು ಹೇಳುವ ಮೂಲಕ ಸರಳತೆಯನ್ನು ಸಾರಿದ್ದಾರೆ. ಬಸವಣ್ಣನವರ ಬಗ್ಗೆ ಬಹುರೂಪಿ ಚೌಡಯ್ಯ ‘ಬಸವಾದಿ ಬದುಕಿದೆ ಲೋಕವೆಲ್ಲ’ ಎಂದಿರುವ ಹಾಗೆ ಬಸವಣ್ಣನವರ ಕಾಯಕಧರ್ಮ, ರಾಜಕೀಯ ಫ್ರೌಢತೆ, ಆರ್ಥಿಕತೆ, ಸಾಮಾಜಿಕತೆ ವಿಶ್ವದೆಲ್ಲೆಡೆ ಇನ್ನಷ್ಟು ಪಸರಿಸುವ ಅಗತ್ಯವಿದೆ. ಅದಕ್ಕಾಗಿ ಇಂತಹ ವೇದಿಕೆಗಳು ಅಗತ್ಯ ಎಂದರು.

ವಿಶೇಷವಾಗಿ ಇಂದು ಚಿಕ್ಕಚಿಕ್ಕ ಮಕ್ಕಳು ಶರಣರ ವಚನಗಳನ್ನು ಕಲಿತು ಹಾಡುತ್ತಿರುವುದು ಉತ್ತಮ ಬೆಳವಣಿಗೆ, ಇದರಿಂದ ಮಕ್ಕಳಲ್ಲಿ ಲೋಕಜ್ಞಾನ, ಸಮ ಸಮಾಜದ ಕಲ್ಪನೆ, ದುಡಿದು ತಿನ್ನುವ, ಶ್ರಮದ ಕಲ್ಪನೆ ಮುಂತಾದವು ಬೆಳೆಯುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಉಷಾಕಿರಣ ಮಾತನಾಡಿ, ಸಾಹಿತ್ಯ ಸಂಸ್ಕøತಿ ವೇದಿಕೆಯು ಉತ್ತಮವಾಗಿ ಕೆಲಸ ಮಾಡುತ್ತಾ ಬಂದು ಒಂದು ಬಡಾವಣೆಗೆ ನೂರಾರು ಸಾಹಿತ್ಯ ಹಾಗೂ ಸಂಸ್ಕøತಿಯ ದಿಗ್ಗಜರನ್ನು ರಾಜಕೀಯ ಪ್ರಮುಖರನ್ನು ಕರೆಸಿ, ಕೂಡಿಸಿ ಮಾಡುತ್ತಿರುವ ಸಾಹಿತ್ಯ ಕೃಷಿ ಮಾದರಿಯಾಗಿದೆ. ಇದರ ರೂವಾರಿ ಸದಾಶಿವಯ್ಯ ಅವರು ಕೈಯಿಂದಲೇ ಹಣಹಾಕಿ ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಆ ಕಾಲದ ಅನುಭವ ಮಂಟಪ ಅಲ್ಲಮರ ನೇತೃತ್ವದಲ್ಲಿಯೂ ಸಮುದಾಯದ ಶರಣರನ್ನು ಸೇರಿಸಿ ಬಸವಣ್ಣ, ಅಕ್ಕಮಹಾದೇವಿ ನಡೆಸುತ್ತಿದ್ದ ರೀತಿ ಅನನ್ಯವಾದುದು. ಆ ರೀತಿ ಕೆಲಸ ಇಲ್ಲೂ ಸಾಗಿದೆ. ಎಲ್ಲರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಜರಗನಹಳ್ಳಿ ಸದಾಶಿವಯ್ಯ ಅವರು ಮಾತನಾಡಿ, ನಾವು ನಿರಂತರವಾಗಿ ಪ್ರತಿವಾರ ಕಲೆ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದ್ದೇವೆ. ಇದಕ್ಕೆ ಸ್ಥಳೀಯರ ಪ್ರೋತ್ಸಾಹವಿದೆ. ಕಲೆ, ಸಾಹಿತ್ಯ, ಸಂಸ್ಕøತಿ ಸ್ವಸ್ತ ಸಮಾಜ ಹಾಗೂ ಸ್ಪಚ್ಛ ಪರಿಸರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

Leave a Reply