ಹಿರಿಯ ಸಮಾಜವಾದಿ, ಅತ್ಯುತ್ತಮ ಸಂಸದೀಯ ಪಟು, ಪ್ರಜಾಪ್ರಭುತ್ವವಾದಿ ನಾಯಕ ಶರದ್ ಯಾದವ್ ನಿಧನರಾಗಿದ್ದಾರೆ. ಯಾದವ್ ಅವರ ಮರಣದೊಂದಿಗೆ ಸ್ವಾತಂತ್ರ್ಯೋತ್ತರ ಭಾರತದ ಸಮಾಜವಾದಿ ಚಳುವಳಿ ಸೃಷ್ಟಿಸಿದ್ದ ಅಪೂರ್ವ ನಾಯಕತ್ವವೊಂದು ಕಣ್ಮರೆಯಾದಂತಾಗಿದೆ.
ಡಾ. ರಾಮಮನೋಹರ ಲೋಹಿಯಾ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದದ ಕಡೆಗೆ ಆಕರ್ಷಿತರಾಗಿದ್ದ ಯಾದವ್ ಎಪ್ಪತ್ತರ ದಶಕದಲ್ಲಿ ಜಯಪ್ರಕಾಶ್ ನಾರಾಯಣ್ ಶುರುಮಾಡಿದ ಇಂದಿರಾ ವಿರೋಧಿ ಆಂದೋಲನದಲ್ಲಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡು ರಾಜಕೀಯಕ್ಕೆ ಧುಮುಕಿದವರು. ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅಪಾರ ನಂಬಿಕೆ, ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಯಾವತ್ತಿಗೂ ಕಳೆದುಕೊಳ್ಳದೆ ರಾಜಕೀಯ ಮಾಡಲೆತ್ನಿಸಿದವರು.
ವಿ.ಪಿ. ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದಕ್ಕಾಗಿ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಆಗ ಮಂಡಲ್ ವಿರೋಧಿ ಆಂದೋಲನದ ನೆಪದಲ್ಲಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ನಿಂತು ಮಂಡಲ್ ಪರ ಹೋರಾಟ ಮಾಡಿದರು.
ಲೋಹಿಯಾ ಸಮಾಜವಾದಿಯಾಗಿದ್ದ ಶರದ್ ಯಾದವ್ ತಾವು ಭಾಗವಾಗಿದ್ದ ರಾಜಕೀಯ ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ ಎಂದಾಗ ಅದನ್ನು ಪ್ರತಿಭಟಿಸಿ ಹೊರಬರುತ್ತಿದ್ದರು. ರಾಜಕೀಯದಲ್ಲಿ ವ್ಯಕ್ತಿಪೂಜೆ ಅಪಾಯಕಾರಿ ಎನ್ನುವುದನ್ನು ಬಲವಾಗಿ ನಂಬಿದ್ದ ಯಾದವ್ ತುರ್ತುಪರಿಸ್ಥಿತಿಯನ್ನು ಜಾರಿ ಮಾಡಿದ ಇಂದಿರಾಗಾಂಧಿಯವರನ್ನು ವಿರೋಧಿಸಿದಷ್ಟೇ ಉಗ್ರವಾಗಿ ಮೋದಿಯ ನಾಯಕತ್ವವನ್ನು ವಿರೋಧಿಸಿದರು.
ರಾಜಕೀಯ ಸ್ಥಿತ್ಯಂತರಗಳ ಕಾರಣಕ್ಕೆ ಕೆಲವರ್ಷ ಎನ್‌ಡಿಎ ಸರ್ಕಾರದ ಭಾಗವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ಮೌಲ್ಯಗಳಿಗೆ ಧಕ್ಕೆಯಾಗುವುದನ್ನು ಸಹಿಸಿಕೊಳ್ಳಲು ಇಚ್ಛೆಪಡದ ರಾಜಕಾರಣಿಯಾಗಿ ಇತಿಹಾಸದಲ್ಲಿ ಉಳಿದು ಹೋಗಿದ್ದಾರೆ.
ಶರದ್ ಯಾದವ್ ಅವರ ಅಗಲಿಕೆ ದೇಶದ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿ ಉಳಿಯಲಿದೆ.
Rest in peace Sharad Yadav ji ✊
– ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು



