ವಿದ್ಯಾರ್ಥಿ ವೇತನ ಕಡಿತ: ತುಳಿತಕ್ಕೊಳಗಾದ ಸಮುದಾಯಗಳ ಬಡ ಕುಟುಂಬಗಳಿಂದ ಬರುವ ಮಕ್ಕಳ ಶಿಕ್ಷಣದ ಹಕ್ಕಿನ ಮೇಲಿನ ದಾಳಿ

3 years ago

ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವ ಕುರಿತು.

ಎಂಟು ಲಕ್ಷ ಆದಾಯ ಹೊಂದಿರುವ ಮೇಲ್ಜಾತಿ ಕುಟುಂಬಗಳಿಗೆ ‘ಮೀಸಲಾತಿ’ ನೀಡಿದ ಕೇಂದ್ರ ಸರ್ಕಾರವು, ಎರಡೂವರೆ ಲಕ್ಷಕ್ಕಿಂತಲೂ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ನಿಲ್ಲಿಸಿರುವುದನ್ನು ಆಲ್ ಇಂಡಯಾ ಫೋರಮ್ ಫಾರ್ ರೈಟ್ ಟು ಎಜುಕೇಷನ್ (AIFRTE) ಒಕ್ಕೊರಲಿನಿಂದ ಖಂಡಿಸುತ್ತದೆ. ಇದು ಈ ಶೈಕ್ಷಣಿಕ ವರ್ಷದಿಂದಲೇ (೨೦೨೨-೨೩) ರಲ್ಲೇ ಅನುಷ್ಟಾನಗೊಳ್ಳಲಿದ್ದು, ಶಿಕ್ಷಣ ಹಕ್ಕು ಕಾಯ್ದೆ – ೨೦೦೯ ಅಡಿಯಲ್ಲಿ 8 ನೇ ತರಗತಿಯ ವರೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಉಚಿತವಾಗಿರುವ ಕಾರಣವನ್ನು ನೀಡಿಲಾಗಿದೆ.

ಇಲ್ಲಿಯವರೆಗೂ, ಈ ವಿದ್ಯಾರ್ಥಿವೇತನದ ಒಟ್ಟು ಮೊತ್ತವನ್ನು ೭೫-೨೫ ಅನುಪಾತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತಿದ್ದವು. ರಾಜ್ಯಗಳೊಟ್ಟಿಗೆ ಚರ್ಚಿಸದೆಯೇ ತೆಗೆದುಕೊಳ್ಳಲಾಗಿರುವ ಈ ನಿರ್ಧಾರವನ್ನು ಈಗ ರಾಜ್ಯ ಸರ್ಕಾರಗಳು ಒಪ್ಪಲೇಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ.

ಇದು, ಐತಿಹಾಸಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳ ಬಡ ಕುಟುಂಬಗಳಿಂದ ಬರುವ ಮಕ್ಕಳ ಶಿಕ್ಷಣದ ಹಕ್ಕಿನ ಮೇಲಿನ ದಾಳಿಯಾಗಿದೆ. ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳ ಇನ್ನಿತರೆ ಖರ್ಚುಗಳನ್ನು ತೋಗಿಸಲು ಈ ವಿದ್ಯಾರ್ಥಿವೇತನಗಳು ಮುಖ್ಯವಾಗಿದ್ದವು. ಈಗ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿರುವ ಕಾರಣದಿಂದ ಅವರು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿ ದುಡಿಯುವ ನಿಟ್ಟಿನಲ್ಲಿ ಅವರನ್ನು ದೂಡಲಾತ್ತಿದೆ.

ಈಗಾಗಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎಂದು ನಂಬಿಸಿ, ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ,ಮುಚ್ಚುವ ಕಾರ್ಯತಂತ್ರವು ದೇಶದೆಲ್ಲೆಡೆ ಜಾರಿಯಲ್ಲಿದೆ. ವಿದ್ಯಾರ್ಥಿವೇತನವನ್ನು ನಿಲ್ಲಿಸಲಾಗುತ್ತಿರುವ ಕಾರಣ ಮಕ್ಕಳು ಶಾಲೆಗಳಿಗೆ ಬರಲು ಅಸಾಧ್ಯವಾದಾಗ, ಕನಿಷ್ಠ ದಾಖಲಾತಿಯೂ ಆಗುತ್ತಿಲ್ಲವೆಂದು ನೆಪವೊಡ್ಡಿ ನೆರೆಹೊರೆಯ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಅಥವಾ ಸಂಪೂರ್ಣವಾಗಿ ಮುಚ್ಚಿ, ಸರ್ಕಾರಿ ಶಾಲೆಗಳ ಆಸ್ತಿಗಳನ್ನೂ, ಜಾಗವನ್ನು ಸೇರಿದಂತೆ ಒಟ್ಟಿನಲ್ಲಿ ಇಡೀ ಶಿಕ್ಷಣ ಕ್ಷೇತ್ರವನ್ನೇ ಖಾಸಗಿಯವರ ಮಡಿಲಿಗೆ ಹಾಕುವುದು ಇದರ ಹಿಂದಿನ ಹುನ್ನಾರ.

ಭಾರತ ಸರ್ಕಾರವು ಈ ಕೂಡಲೇ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸುತ್ತೇವೆ. ಅಲ್ಲದೇ, ಒಂದರಿಂದ ಎಂಟನೇ ತರಗತಿಯವರೆಗೆ ನೀಡಲಾಗುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಸದ್ಯದ ಹಣದುಬ್ಬರವನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.

– ಪ್ರೊ. ಜಗಮೋಹನ್ ಸಿಂಗ್, ಅಧ್ಯಕ್ಷರು, AIFRTE

– ಪ್ರೊ. ಮಧು ಪ್ರಸಾದ್, ವಕ್ತಾರರು, AIFRTE

Leave a Reply