ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಪುರಸ್ಕಾರಕ್ಕೆ ಯೋಗ್ಯವಾದ ಯಾವುದೇ ಅಂಶಗಳೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂಕೋರ್ಟ್ನಲ್ಲಿ ಮಹಾರಾಷ್ಟ್ರ ಸರ್ಕಾರ ಅರ್ಜಿ ಹಾಕಿದೆ. ನನ್ನ ಪ್ರಕಾರ ಈ ಅರ್ಜಿಯು ವಿಚಾರಣೆ ನಡೆಸಲು ಅರ್ಹತೆಯೇ ಇಲ್ಲ. ನಮಗೆ ಕಾನೂನಿನಲ್ಲಿ ಜಯ ಸಿಗುವ ವಿಶ್ವಾಸ ಇದೆ ಎಂದರು.
ಮಹಾರಾಷ್ಟ್ರ ಸರ್ಕಾರ ಹಾಕಿರುವ ಅರ್ಜಿಗೆ ಕಾನೂನಿನ ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ. ನಮ್ಮ ಸರ್ಕಾರದ ನಿಲುವು ಏನಿರಬೇಕೆಂಬುದನ್ನು ಈಗಾಗಲೇ ಕಾನೂನು ತಜ್ಞರ ಚರ್ಚೆ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸಿದ್ದರಾಗಿದ್ದಾರೆ ಎಂದರು.
ಈ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ಅರ್ಹತೆಯ ಕುರಿತಾಗಿಯೇ ಈಗ ವಿಚಾರಣೆ ನಡೆಯಲಿದೆ. ಈ ಹಿಂದೆಯೇ ಈ ಬಗ್ಗೆ ಚರ್ಚೆಯಾಗಿದೆ ಇದರ ಆಧಾರದಲ್ಲಿಯೇ ಮಹಾರಾಷ್ಟ್ರದ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇದೆ ಎಂದರು.
ಶಾಂತಿಭಂಗ ಯತ್ನ: ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಿರಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಈಗಾಗಲೇ ಇತ್ಯರ್ಥ ಆಗಿರುವ ವಿಚಾರ. ನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಗಡಿಯೊಳಗಿನ ಪ್ರದೇಶ ಅವರದ್ದು. ಇಲ್ಲಿರುವವರೆಲ್ಲ ನಮ್ಮವರೇ ಎಂದರು.
ಬೆಳಗಾವಿಯಲ್ಲಿ ನಾವು ಸುವರ್ಣಸೌಧ ಕಟ್ಟಿದ್ದು, ಯಾರೂ ಶಾಂತಿ ಭಂಗದ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ ಅವರು ನಮ್ಮ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಮೇಲಿರುವ ಕಳಂಕ ಮರೆಮಾಚಿಕೊಳ್ಳಲು ಇದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಸಂಚು ಇದೆ ಎಂದು ಆರೋಪಿಸಿದರು.




