ಸಹಕಾರಿ ಚಳುವಳಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ

4 years ago

#Saving #cooperative #movement #first #duty #us #gtnatendrakumar

1994ರಲ್ಲಿ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಒಪ್ಪಂದಕ್ಕೆ ಪಿ ವಿ ನರಸಿಂಹರಾವ್ ಮತ್ತು ಡಾ.ಮನಮೋಹನ್ ಸಿಂಗ್ ಜೋಡಿಯ ಸಹಿ ಹಾಕಿದ ನಂತರ, ದೇಶದೊಳಕ್ಕೆ ವಿದೇಶೀ ಕಂಪನಿಗಳು ಎಲ್ಲಾ ರಂಗಗಳಲ್ಲೂ ಲಗ್ಗೆ ಇಡಲು ಆರಂಭಿಸಿದವು. ವಿದೇಶಿ ಬಂಡವಾಳಕ್ಕೆ ಮಿತಿ ತೆಗೆಯಲಾಯಿತು. ವಿಮಾ ಕಂಪೆನಿಗಳಿಗೆ ಏಕ ಸ್ವಾಮ್ಯತೆಯನ್ನು ಇತ್ತೀಚೆಗೆ ರದ್ದು ಪಡಿಸಲಾಯ್ತು, ಕಾನೂನು ಸಲಹೆ ನೀಡಲು ವಿದೇಶಿ ವಕೀಲರು ಮತ್ತು ಕಂಪನಿಗಳಿಗೂ ಅವಕಾಶ ನೀಡಲಾಗಿದೆ.

ಖಾಸಗಿ ಕಂಪನಿಗಳಿಗೆ ಯಥೇಚ್ಛವಾಗಿ ಸಾರ್ವಜನಿಕ ಬ್ಯಾಂಕುಗಳಿಂದ ಸಾಲ, ರೈತರಿಂದ ಭೂಮಿ ಕಸಿದುಕೊಡಲಾಯಿತು. ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ ಅವರ ತಿಜೋರಿ ದೊಡ್ಡದು ಮಾಡಲಾಗಿದೆ. ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವುದಲ್ಲದೆ ತಮ್ಮ ಗುಣಮಟ್ಟ, ಕಡಿಮೆ ದರ, ಸೇವೆ, ಮತ್ತು ತಮ್ಮ ಉದ್ದಿಮೆಗಳಲ್ಲಿ ಉದ್ಯೋಗ ಮತ್ತು ಪದೋನ್ನತಿಯಲ್ಲಿ ಮೀಸಲಾತಿ ಅನುಸರಿಸುತ್ತಿದ್ದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಯಿತು. ಇಲ್ಲವೇ ಮುಚ್ಚಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಗೆ 4 G ಸೇವೆ ಒದಗಿಸಲು ಕೇಂದ್ರ ಸರ್ಕಾರ ಅನುಮತಿಸುತ್ತಿಲ್ಲ.

ರೈತರಿಂದ ಕೃಷಿ ಭೂಮಿಯನ್ನು, ಕೃಷಿ ಚಟುವಟಿಕೆಯನ್ನು, ಕೃಷಿ ಮಾರಾಟ  ವ್ಯವಹಾರವನ್ನು ಖಾಸಗಿ ಅವರಿಗೆ ಒಪ್ಪಿಸಲು ತಂದಿದ್ದ ವಿಧೇಯಕಗಳನ್ನು ಪಂಜಾಬ್, ಹರಿಯಾಣ, ಉತ್ತರಪ್ರದೇಶದ ರೈತರು ಅಭೂತಪೂರ್ವ ಹೋರಾಟ ಮಾಡಿ ಕೇಂದ್ರ ಸರ್ಕಾರವನ್ನು ಮಣಿಸಿದವು.

ಖಾಸಗೀಕರಣ, ಉದಾರೀಕರಣದ ಫಲವಾಗಿ ದೇಶದಲ್ಲಿ ಸಣ್ಣಪುಟ್ಟ ಉದ್ದಿಮೆಗಳು, ವ್ಯಾಪಾರಿಗಳು, ಕುಲ ಕಸುಬುಗಳು ನಾಶವಾದವು. ನಿರುದ್ಯೋಗ ತಾಂಡವವಾಡುತ್ತಿದ್ದು ಸಣ್ಣ, ಮಧ್ಯಮ  ಮತ್ತು ಬೃಹತ್ ಕಾರ್ಖಾನೆಗಳಲ್ಲಿ ಖಾಯಂ ಕಾರ್ಮಿಕರನ್ನು ಹೊರಗಟ್ಟಿ, ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಜಾರಿ ಮಾಡಲು ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ.

ಸ್ವಯಂ ಉದ್ಯೋಗವೆಂದರೆ ಪಕೋಡಾ ಮಾರುವುದು ಎಂದು ಭಾವಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಯನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮರೆತಿದ್ದು, ಹಾಲಿ ನೌಕರರಿಗೆ ಒಂದಿಷ್ಟು ವೇತನ ಹೆಚ್ಚಿಸಿ ಅವರ ಬಾಯಿಯನ್ನು ಮುಚ್ಚಿಸಲಾಗುತ್ತಿದೆ.

ಜಿಎಸ್‌ಟಿ ಎಂಬ ಡಾ. ಮನಮೋಹನ್ ಸಿಂಗ್ ಪ್ರಣೀತ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿ, ರಾಜ್ಯ ಸರ್ಕಾರಗಳ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಲಪಟಾಯಿಸುತ್ತಿರುವುದು, ಪೆಟ್ರೋಲಿಯಂ ಉತ್ಪನ್ನಗಳು, ಅಡುಗೆ ಅನಿಲ ಮುಂತಾದ ಜೀವನ ಅವಶ್ಯಕ ವಸ್ತುಗಳ ಬೆಲೆಯನ್ನು ಏರಿಸಿ ಕೆಳ ಮತ್ತು ಮಧ್ಯಮ ವರ್ಗದ ಜನರ ಶೋಷಣೆಯನ್ನು ತೀವ್ರಗೊಳಿಸಿದೆ.

ವಿದ್ಯಾವಂತ ಯುವಕರು, ವಿದ್ಯಾರ್ಥಿಗಳು, ದಲಿತ ಶೂದ್ರ, ಹುಡುಗರು, ಶ್ರೀಸಾಮಾನ್ಯರ ಗಮನವನ್ನು ಧಾರ್ಮಿಕ ವಿಚಾರಗಳು, ಗೋಮಾಂಸ ನಿಷೇಧ, ಪುತ್ತಳಿಗಳ ನಿರ್ಮಾಣಗಳ ಮೂಲಕ ಸೆಳೆಯಲಾಗುತ್ತಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಪೂರ್ಣವಾಗಿ ಖಾಸಗಿಯವರು ಅತಿಕ್ರಮಿಸಿಕೊಳ್ಳತೊಡಗಿದ್ದಾರೆ. ಸಾಮಾನ್ಯ ವರ್ಗದ ಜನರಿಗೆ ಶಿಕ್ಷಣ, ಉನ್ನತ ಶಿಕ್ಷಣ ದೊರಕದಂತೆ, ಆರೋಗ್ಯ ಸೇವೆಗಳು ಸಹ ಲಭ್ಯವಿಲ್ಲದಂತೆ ಮಾಡಲಾಗುತ್ತಿದೆ.

ರಸ್ತೆ, ರೈಲ್ವೆ, ವಿಮಾನ ಮತ್ತು ಸಮುದ್ರಯಾನಗಳನ್ನು ಖಾಸಗಿಯವರ ವಶಕ್ಕೆ ಒಪ್ಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳು ನಾಶವಾಗುತ್ತಿರುವಂತೆ ಸರ್ಕಾರದ ಬಹುತೇಕ ಎಲ್ಲಾ ಸೇವಾ ಇಲಾಖೆಗಳು ನಾಶವಾಗಿ ತೆರಿಗೆ ವಸೂಲಾತಿ ಇಲಾಖೆ, ಉದ್ದಿಮೆಗಳಿಗೆ ಲೈಸೆನ್ಸ್ ಕೊಡುವ ಇಲಾಖೆ, ವಿದೇಶಾಂಗ ವ್ಯವಹಾರಗಳ ಇಲಾಖೆ, ಸೇನೆ ಮತ್ತು ಗೃಹ ಇಲಾಖೆಗಳು ಮಾತ್ರ ಈ ದೇಶದಲ್ಲಿ ಉಳಿದುಕೊಳ್ಳಬಹುದು.

ಇಷ್ಟೆಲ್ಲ ದುರಂತಗಳು ನಡೆಯುತ್ತಿದ್ದರೂ ಗ್ರಾಮೀಣ ಪ್ರದೇಶದ ರೈತರು, ಸಣ್ಣಪುಟ್ಟ ಪಟ್ಟಣ ಪ್ರದೇಶದ ನಿವಾಸಿಗಳು ಸಹಕಾರಿ ಚಳುವಳಿಯ ಮೂಲಕ ಸ್ವತಂತ್ರವಾಗಿ ಸ್ವಾಭಿಮಾನಿಗಳಾಗಿ ಬದುಕುತ್ತಿರುವುದು ನಮ್ಮನ್ನಾಳುವವರಿಗೆ ಸಹಿಸಲಾಗುತ್ತಿಲ್ಲ. ಸಂವಿಧಾನದಲ್ಲಿ ಸಹಕಾರಿ ರಂಗ ರಾಜ್ಯಗಳ  ವಿವೇಚನೆಗೆ ಬಿಟ್ಟ ವಿಚಾರವಾಗಿದ್ದರೂ ಇತ್ತೀಚಿಗೆ ಮೋದಿ ಸರ್ಕಾರ ಕೇಂದ್ರದಲ್ಲಿ ಸಹಕಾರಿ ಸಚಿವ ಹುದ್ದೆಯನ್ನು ಸೃಷ್ಟಿಸಿ ತನ್ಮೂಲಕ ದೇಶದ ಸಹಕಾರಿ ಚಳುವಳಿಯನ್ನು ಉದ್ಯಮಗಳನ್ನು ಕೇಂದ್ರದ ಹಿಡಿತಕ್ಕೆ ಒಳಪಡಿಸಿ ಮುಂದಿನ ದಿನಗಳಲ್ಲಿ ಅವುಗಳನ್ನು ಖಾಸಗೀಕರಣಕ್ಕೆ ಒಳಪಡಿಸುವ ಹುನ್ನಾರ ನಡೆಸಿದೆ ಎಂದು ಕೇಂದ್ರ ಸರ್ಕಾರದ ವರ್ತನೆಗಳನ್ನು ನೋಡುತ್ತಿರುವ ಯಾರಿಗೆ ಆದರೂ ಅನ್ನಿಸದಿರದು.

ಸಹಕಾರಿ ಚಳುವಳಿಯಲ್ಲಿರುವ ಭ್ರಷ್ಟಾಚಾರ ಲಂಚ ಕೋರತನ, ಸ್ವಜನ ಪಕ್ಷಪಾತ ಇವುಗಳನ್ನ ನಿಲ್ಲಿಸಿ, ಗುಣಮಟ್ಟದ ಉತ್ಪನ್ನ ಸೇವೆಗಳನ್ನು ಒದಗಿಸಿ ಭಾರತದ ಬಡವರನ್ನು ಶ್ರೀ ಸಾಮಾನ್ಯರನ್ನು ಬದುಕಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

– ಜಿ ಟಿ ನರೇಂದ್ರ ಕುಮಾರ್, ವಕೀಲರು, ಬೆಂಗಳೂರು

Leave a Reply