ಭೂ ಕುಸಿತದ ಬಗ್ಗೆ ಇರಲಿ ಎಚ್ಚರ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ನಡೆಸಿದರು. ಸಭೆಯಲ್ಲಿ ಭೂ ಕುಸಿತದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಈ ವೇಳೆ ಸಚಿವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಕಳೆದ ಮಳೆಗಾಳದ ಋತುವಿನಲ್ಲಿ 135 ಕಡೆಗಳಲ್ಲಿ ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು ಅಂದಾಜು 40 ಕೋಟಿ ರೂಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಜನ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟ ನಂತರ ಪರಿಹಾರ ನೀಡುವುದಲ್ಲ ನಮ್ಮ ಕೆಲಸ. ಬದಲಾಗಿ ಭೂ ಕುಸಿತಕ್ಕೂ ಮೊದಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಜೀವ ಉಳಿಸುವುದು ನಮ್ಮ ಕೆಲಸ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಂತ್ರಜ್ಞಾನದ ಸಹಾಯದಿಂದ ಎಲ್ಲೆಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಪಟ್ಟಿ ತಯಾರಿಸಬೇಕು. ಆ ಭಾಗಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜಿಲ್ಲಾಡಳಿತ ಪ್ರಾಮಾಣಿಕ ಪಟ್ಟಿ ಸಿದ್ದಪಡಿಸಿದರೆ, ಭೂ ಕುಸಿತ ತಡೆಗೆ ಸರ್ಕಾರವೂ ಮತ್ತಷ್ಟು ಹಣ ಸಹಾಯ ಮಾಡಲಿದೆ”ಎಂದು ತಿಳಿಸಿದರು.




