ಶಿವಮೊಗ್ಗ: ರಾಜ್ಯ ಸರ್ಕಾರ ಬರ ಘೋಷಣೆಗೆ ಸಿದ್ದತೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಮತ್ತು ಗ್ರೌಂಡ್ ಟ್ರುತಿಂಗ್ ( ಬೆಳೆ ಪರಿಶೀಲನೆ ) ನಡೆಸಿ ವಾರಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, “ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಿಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇಕಡಾ 73 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆಯಾಗಿ 711ಮಿ.ಮೀ ಮಳೆಯಾಗಬೇಕಿದ್ದು, ಕೇವಲ 526 ಮಿ.ಮೀ ಮಳೆಯಾಗಿದೆ. ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ 19ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹೀಗಾಗಿ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ (ground truthing) ಮಾಡಲು ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಸಹಾಯವಾಗಲಿದ್ದು, ಅಧಿಕಾರಿಗಳು ವಾರಾತ್ಯದೊಳಗೆ ಸಮೀಕ್ಷೆ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ತಕರಾರು ಪ್ರಕರಣಗಳ ವಿಲೇವಾರಿಗೆ ಒಂದು ವಾರದ ಗಡುವು: ತಕರಾರು ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಈ ಹಿಂದಿಗಿಂತಲೂ ಶಿವಮೊಗ್ಗ ಪ್ರಸ್ತುತ ಉತ್ತಮ ಸಾಧನೆ ಮಾಡಿದೆ. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಜಿಲ್ಲೆಯಲ್ಲಿ ನೂರಾರು ತಕರಾರು ಪ್ರಕರಣಗಳು ಈಗಲೂ ಬಾಕಿ ಇವೆ. ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಪ್ರತಿಯೊಂದು ಪ್ರಕರಣವನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
ತಕರಾರರು ಪ್ರಕರಣಗಳ ಇತ್ಯರ್ಥ ವಿಳಂಭವಾಗುತ್ತಿರುವುದರಿಂದ ಜನ ಸಾಮಾನ್ಯರು ತಾಲೂಕು-ಜಿಲ್ಲಾ ಕಚೇರಿಗಳಿಗೆ ಪ್ರತಿದಿನ ನಡೆದಾಡುವಂತಾಗಿದೆ. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು. ಜನ ಸಾಕಷ್ಟು ನಿರೀಕ್ಷೆಗಳಿಂದ ಕಾಂಗ್ರೆಸ್ ಗೆ ಮತ ನೀಡಿ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಜನಪರ ಆಡಳಿತ ನೀಡುವುದು ನಮ್ಮ ಗುರಿಯಾಗಬೇಕು. ಆ ನಿಟ್ಟಿನಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಠ ನಾಲ್ಕು ದಿನ ಕಾರ್ಯನಿರ್ವಹಿಸಬೇಕು. ಎಲ್ಲಾ ಬಾಕಿ ಪ್ರಕರಣಗಳನ್ನೂ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆದರೆ, ಶೀಘ್ರ ವಿಲೇ ನೆಪದಲ್ಲಿ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು.
ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಅವರು, “ಸಾಗರ ಉಪ ವಿಭಾಗದಲ್ಲಿ 76 ಪ್ರಕರಣಗಳ ವಿಚಾರಣೆ ಮುಗಿದು ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟಿದ್ದರೂ ಆದೇಶ ಪ್ರಕಟವಾಗಿರುವುದಿಲ್ಲ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು”ಎಂದು ತಾಕೀತು ಮಾಡಿದರು.




