ಬಾಗಲಕೋಟೆ: ಬಹುದಿನಗಳ ಬೇಡಿಕೆ ಹಾಗೂ 43 ವರ್ಷಗಳ ಐತಿಹಾಸಿಕ ಹೋರಾಟವಾದ ಸಾವಳಗಿ ತಾಲೂಕು ಹೋರಾಟದ ಕನಸು, ಕನಸಾಗಿಯೇ ಊಳಿದಿದೆ, ತಾಲೂಕು ಕೇಂದ್ರಕ್ಕಾಗಿ ಈಗಾಗಲೇ ಎರಡು ಬಾರಿ ಸಾರ್ವಜನಿಕರು ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದ್ದು, ಈಗ ಮತ್ತೊಮ್ಮೆ ಘೋಷಣೆಯಾಗಿರುವ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಸಾವಳಗಿ ತಾಲೂಕು ಹೋರಾಟ ಸಮಿತಿಯ ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಸಾವಳಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವವರೆಗೆ ಎಲ್ಲಾ ರೀತಿಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಒಮತ್ತದ ತಿರ್ಮಾನ ಮಾಡಲಾಗಿದೆ. ಆದ್ದರಿಂದ ಎಲ್ಲಾ ಪಕ್ಷದ ಮುಖಂಡರು ಎಲ್ಲಾ ರೀತಿಯ ಚುನಾವಣೆಗಳನ್ನು ಬಹಿಷ್ಕರಿಸಬೇಕು, ಒಂದು ವೇಳೆ ಚುನಾವಣೆಯನ್ನು ಮಾಡಲು ಪ್ರಯತ್ನಿಸಿದರೆ ಮುಂದಿನ ನಿರ್ಧಾರ ಉಗ್ರವಾಗಿರುತ್ತದೆ ಎಂದು ಸಾರ್ವಜನಿಕರಿಗೆ ಹಾಗೂ ರಾಜಕೀಯ ಮುಖಂಡರಿಗೆ ಹೋರಾಟ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದರು.
ಸರ್ಕಾರ ನೂತನವಾಗಿ ಘೋಷಣೆ ಮಾಡಿದ ತಾಲೂಕು ಕೇಂದ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೇಂದ್ರಗಳು ನಿಯೋಜಿತ ಸಾವಳಗಿ ತಾಲೂಕು ಕೇಂದ್ರಕ್ಕಿಂತ ಎಲ್ಲಾ ರೀತಿಯಲ್ಲಿ ಹಿಂದುಳಿದಿವೆ. ಆದರೂ ಅವುಗಳನ್ನು ಘೋಷಣೆ ಮಾಡಿದ್ದು ಮಾತ್ರ ತಮ್ಮ ರಾಜಕೀಯ ಇಚ್ಚಾಶಕ್ತಿಗೆ ಕಾರಣವಾಗಿದೆ. ಸಾವಳಗಿ ಜನತೆಯ ಮೇಲೆ ಮಲತಾಯಿ ಧೋರಣೆ ತೋರಿದಂತಾಗಿದೆ. ಸಾರ್ವಜನಿಕರ ನಿರ್ಣಯದಂತೆ ಪಕ್ಷಾತೀತವಾಗಿ ಎಲ್ಲರನ್ನು ಒಗ್ಗೂಡಿಸಿ ಚುನಾವಣೆ ಬಹಿಷ್ಕರಸೋಣ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಕರೆ ನೀಡಿದರು.
ಊರಿನ ಹಿರಿಯರಾದ ಸತಗೌಡ ನ್ಯಾಮಗೌಡ ಮಾತನಾಡಿ, ಎಲ್ಲಾ ಪಕ್ಷಗಳು ಅಧಿಕಾರದಲ್ಲಿದ್ದಾಗ 43 ವರ್ಷಗಳಿಂದ ಅನೇಕ ಹೋರಾಟಗಳ ಮೂಲಕ ಮನವಿ ನೀಡುತ್ತಾ ಬಂದಿದ್ದೇವೆ. ಆದರೂ ನಮ್ಮ ಕಡೆಗೆ ಯಾವುದೇ ಪಕ್ಷದ ನಾಯಕರು ತಲೆ ಎತ್ತಿ ನೋಡುತ್ತಿಲ್ಲ. ಇಷ್ಟು ದಿವಸ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇನ್ನು ಮುಂದೆಯೂ ಇದೆ ರೀತಿ ಒಗ್ಗಟ್ಟಿನಿಂದ ನಮ್ಮ ಹೋರಾಟ ಮುಂದುವರೆಸೋಣ ಹಾಗೂ ಸಾವಳಗಿ ಹೋಬಳಿಯ ಎಲ್ಲಾ ಗ್ರಾಮದ ಮುಖಂಡರನ್ನು ಸೇರಿಸಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಡಿಎಸ್‍ಎಸ್ ರಾಜ್ಯ ಸಂಚಾಲಕರಾದ ರಾಜು ಮೇಲಿನಕೇರಿ ಮಾತನಾಡಿ, ಸಾರ್ವಜನಿರ ಒತ್ತಾಯದಿಂದ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದು, ಇನ್ನು ಮುಂದೆ ಸಾರ್ವಜನಿಕರಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಸಾರ್ವಜನಿಕ ಕೆಲಸಗಳನ್ನು ಆಗುವಂತೆ ಊರಿನ ಹಿರಿಯರ ಸಮಿತಿ ಮಾಡಿ ನೋಡಿಕೊಳ್ಳುವುದು ನಮ್ಮೆಲ್ಲರ ಹೋಣೆ ಎಂದರು
ಮುಖಂಡರಾದ ಎ.ಜಿ.ಪಾಟೀಲ ಮಾತನಾಡಿ ಡಿ.13 ರಿಂದ ಗ್ರಾಮ ಪಂಚಾಯತಿ ಮುಂಭಾಗ ಧರಣಿ ಸತ್ಯಾಗ್ರಹ ಮಾಡಿ. ಡಿ. 17ರ ಸಾಯಂಕಾಲ 4 ಗಂಟೆಯ ನಂತರ ಸಾವಳಗಿಯಿಂದ “ನಮ್ಮ ನಡೆಗೆ ಬೆಳಗಾವಿಯ ಅಧಿವೇಶನ ಕಡೆಗೆ”ಎಂಬ ಘೋಷವಾಕ್ಯದೊಂದಿಗೆ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ಮೂಲಕ ಹೋಗಿ ಮುಖ್ಯಮಂತ್ರಿಗಳಿಗೆ ನಮ್ಮ ಹೋರಾಟದ ಬಗ್ಗೆ ಮನವರಿಕೆ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಆಡಳಿತ ಅಧಿಕಾರಿಯ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶ
ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದಾಗಿನಿಂದ ಮೊದಲ ಬಾರಿ ಇದ್ದ ಬೇರೆ ಇಲಾಖೆಯ ಅಧಿಕಾರಿಯೂ ಆಡಳಿತ ಅಧಿಕಾರಿ ಆಗಿದ್ದಾಗ ಯಾವುದೇ ತೊಂದರೆ ಇಲ್ಲದೇ ಊರಿನ ಅಭಿವೃದ್ಧಿಯಾಗಿದೆ. ಆದರೆ ಇವತ್ತು ಮಾತೃ ಇಲಾಖೆಯ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರವಣ ನಾಯಕ ಅವರೇ ಆಡಳಿತ ಅಧಿಕಾರಿ ಆಗಿದ್ದರೂ ಊರಿನ ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆ ಇವರ ನಿರ್ಲಕ್ಷವೇ ಕಾರಣವಾಗಿದೆ. ದೂರವಾಣಿ ಮೂಲಕ ಕರೆ ಮಾಡಿದರೂ ಸ್ವೀಕರಿಸುವದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆಡಳಿತ ಅಧಿಕಾರಿಯಾಗಿ ನೇಮಕವಾದಾಗಿನಿಂದ ನಡೆಸಿರುವ ಸಾರ್ವಜನಿಕ ಸಭೆಗಳು ಎಷ್ಟು? ಇವರು ಅನುದಾನ ಬಳಕೆ ಮಾಡಿದ್ದೆಷ್ಟು ಎಂದು ಒಂದು ವಾರದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಇಲ್ಲವಾದಲ್ಲಿ ಸಾವಳಗಿ ಬಂದ್ ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಹಾಗೂ ಹೋರಾಟ ಸಮಿತಿಯವರು ಆಕ್ರೋಶ ವ್ಯಕ್ತಪಡಿಸಿದರು.



