ಬೆಂಗಳೂರು: ನೀನಾಸಂ ಮಂಜು ನಿರ್ದೇಶನದ ನೈಜ ಘಟನೆ ಆಧರಿಸಿದ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಮಾರ್ಚ್ 4ರಂದು ಬಿಡುಗಡೆಯಾಗಲಿದೆ. ಸಿನಿಮಾದ ಹಾಡು ‘ಈ ಗಾಳಿ ತಂಗಾಳಿ’ ಹಾಡಿನ ಲಿರಿಕಲ್ ವಿಡಿಯೋವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕೂ ಮುನ್ನ ಮೂರು ಹಾಡುಗಳು ಹಾಗು ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ವಿ.ರಘು ಶಾಸ್ತ್ರಿ ರಚಿಸಿರುವ ‘ಈ ಗಾಳಿ ತಂಗಾಳಿ’ ಹಾಡಿಗೆ ಶ್ವೇತ ಪ್ರಭು ದನಿ ನೀಡಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಹಾಡು ಮೂಡಿಬಂದಿದೆ.
ಕನ್ನೇರಿ ಮಹಿಳಾ ಪ್ರಧಾನ ಹಾಗು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಕೊಡಗಿನಲ್ಲಿ ಸಾಮಾಜಿಕ ಹೋರಾಟಗಾರರಿಂದಾಗಿ ರಾಜ್ಯದಾದ್ಯಂತ ಪ್ರತಿಧ್ವನಿಸಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆ ಚಿತ್ರದಲ್ಲಿ ಬಳಕೆಯಾಗಿದೆ.
ಪ್ರಕೃತಿಯನ್ನೇ ಉಸಿರಾಡುವ ಬುಡಕಟ್ಟು ಜನಾಂಗ ಒಂದನ್ನು ಒಕ್ಕಲೆಬ್ಬಿಸಿದ ಸಮಯದ ಕಥಾನಕ ಚಿತ್ರದಲ್ಲಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಬದುಕು ತೆಗೆದುಕೊಳ್ಳುವ ತಿರುವುಗಳು, ಹೋರಾಟದ ಕಥಾಹಂದರವನ್ನು ಸಿನಿಮಾದಲ್ಲಿ ಹಿಡಿದಿಡಲಾಗಿದೆ. ಅರ್ಚನಾ ಮಧುಸೂಧನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೋಟಿಗಾನಹಳ್ಳಿ ರಾಮಯ್ಯ ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ನೀಸಾಸಂ ಮಂಜು ನಿರ್ವಹಿಸಿದ್ದಾರೆ. ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಸೇರಿದಂತೆ ಅನುಭವಿ ನಟನಟಿಯರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿದ್ದು, ಛಾಯಾಗ್ರಹಣದ ಹೊಣೆಯನ್ನು ಗಣೇಶ್ ಹೆಗ್ಡೆ ಹೊತ್ತಿದ್ದಾರೆ. ಸುಜಿತ್ ನಾಯಕ್ ಸಂಕಲನ ಮಾಡಿದ್ದಾರೆ.




