ಕೋಮು ವೈಷಮ್ಯದ ಕಾರಣ ಕೊಲೆಯಾದ ಶಿವಮೊಗ್ಗದ ಹರ್ಷನಿಗೆ ಸರ್ಕಾರದಿಂದ 25 ಲಕ್ಷ ಕೊಡಲಾಯಿತು. ಸಾಯುವುದು ಖಚಿತ ಎಂದು ತಿಳಿದ ತಕ್ಷಣ ಅಂಗಾಂಗಗಳನ್ನು ದಾನ ಮಾಡಿ ಇಡೀ ಸಮಾಜಕ್ಕೆ ಮಾದರಿಯಾದ ರಕ್ಷಿತಾಬಾಯಿ ಕುಟುಂಬಕ್ಕೆ ಕೇವಲ 5 ಲಕ್ಷ. ಈ ಇಬ್ಬಗೆ ನೀತಿ ಸಲ್ಲದು.
ನಿನ್ನೆ ಚಿಕ್ಕಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ 17 ವರ್ಷದ ದಲಿತ ಲಂಬಾಣಿ ಸಮುದಾಯಕ್ಕೆ ಸೇರಿದ ರಕ್ಷಿತಾಬಾಯಿ ಎನ್ನುವ ಯುವತಿ ಬಸ್ಸಿನಿಂದ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಬ್ರೈನ್ ಡೆಡ್ ಆಗಿ ಮೃತಪಟ್ಟಿರುತ್ತಾಳೆ. ಇನ್ನೇನು ಆಕೆ ಬದುಕುವುದೇ ಇಲ್ಲ ಎಂದು ವೈದ್ಯರು ಹೇಳಿದ ತಕ್ಷಣ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ಮುಂದಾದರು.. ವೈದ್ಯರು ಹೇಳಿದಂತೆ ರಕ್ಷಿತಾಳ ಅಂಗಾಂಗಗಳು ಒಟ್ಟು ಒಂಬತ್ತು ಜನರಿಗೆ ಜೀವದಾನವನ್ನು ನೀಡಿದೆ.. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ರಾಜೀವ್ ಸರ್ಕಾರದ ರವರು ರಕ್ಷಿತಾಳ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಸರ್ಕಾರದಿಂದ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ 5 ಲಕ್ಷದ ಚೆಕ್ ಜೊತೆಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ 1 ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿಯಲ್ಲಿ ಆಕೆಯ ತಾಯಿಗೆ 2 ಲಕ್ಷ ಹಣವನ್ನು ಚೆಕ್ ಮೂಲಕ ವಿತರಿಸಿರುತ್ತಾರೆ ಇದಕ್ಕಾಗಿ ಇಡೀ ಬಂಜಾರ ಜನಾಂಗದ ಪರವಾಗಿ ರಾಜೀವ್ ಅವರಿಗೆ ಧನ್ಯವಾದಗಳು..
ಇತ್ತೀಚೆಗೆ ಕಿಡಿಗೇಡಿ ಮತಾಂಧರಿಂದ ಕೋಮು ವೈಷಮ್ಯದ ಕಾರಣಕ್ಕೆ ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಎನ್ನುವ ಯುವಕನ ಪೋಷಕರಿಗೆ ಕರ್ನಾಟಕದ ಮುಖ್ಯಮಂತ್ರಿಗಳು 25 ಲಕ್ಷ ಹಣವನ್ನು ಘೋಷಣೆ ಮಾಡಿದ್ದರು. ಇಲ್ಲಿ ಗಮನಿಸಿ ಹರ್ಷನೂ ಹಿಂದೂ, ರಕ್ಷಿತಾ ಬಾಯಿ ಯೂ ಹಿಂದೂ ಧರ್ಮಕ್ಕೆ ಸೇರಿದವಳು.. ಹರ್ಷ ಯಾವ ರೀತಿಯಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾನೋ ತಿಳಿಯದು ಆದರೆ ರಕ್ಷಿತಾ ಬಾಯಿಯ ಅಂಗಾಂಗಗಳನ್ನು ದಾನ ಮಾಡಿ ಅವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.. ಕಡುಬಡತನದಲ್ಲಿದ್ದರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು ಯಾವುದೇ ಧರ್ಮಕ್ಕೆ ಮತಾಂತರಗೊಂಡಿರಲಿಲ್ಲ ಇದಿಷ್ಟು ಸಾಕಲ್ಲವೇ ಇವರು ಕೂಡ ಹರ್ಷನಿಗಿಂತ ಹೆಚ್ಚು ಹಿಂದುಗಳು ಅನ್ನೋದಕ್ಕೆ..
ಹಾಗಿರುವಾಗ ಸರ್ಕಾರ ಮೃತರ ಕುಟುಂಬಕ್ಕೆ ಸಹಾಯಧನ ಘೋಷಿಸುವಾಗ ಮಲತಾಯಿ ಧೋರಣೆ ಏತಕ್ಕೆ? ಈಕೆ ದಲಿತ ವರ್ಗಕ್ಕೆ ಸೇರಿದವಳು ಎನ್ನುವ ಕಾರಣಕ್ಕೆ ಈ ಭೇದಭಾವವೇ?
ಪಿ.ರಾಜೀವ್ ಅವರನ್ನು ಸೇರಿಸಿ ಬಂಜಾರ ಜನಾಂಗದ ಎಲ್ಲಾ ಶಾಸಕ/ ಸಂಸದರು ಕೂಡಲೇ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿ ರಕ್ಷಿತಾಬಾಯಿಯ ಕುಟುಂಬಕ್ಕೆ 25 ಲಕ್ಷ ಹಣವನ್ನು ಕೊಡಿಸಬೇಕು. ಇಲ್ಲವಾದರೆ ಈ ಸರ್ಕಾರ ತಮಗೆ ರಾಜಕೀಯವಾಗಿ ಲಾಭವಾಗುವ ಹೆಣಗಳಿಗೆ ಮಾತ್ರ 25 ಲಕ್ಷ ಘೋಷಿಸುತ್ತಾರೆ ಎಂದಾಗುತ್ತದೆ..
– ರುದ್ರು ಪುನೀತ್ .ಆರ್.ಸಿ., ಸಾಮಾಜಿಕ ಹೋರಾಟಗಾರರು



