ಕೋಲಾರದಲ್ಲಿ ಕಂಡ ಪಾನಮತ್ತ ಮುಖಗಳು…: ರವಿಕೃಷ್ಣಾರೆಡ್ಡಿ

4 years ago

ಕೋಲಾರದಲ್ಲಿ ಕಂಡ ಪಾನಮತ್ತ ಮುಖಗಳು…

KRS ಪಕ್ಷದ ಜಿಲ್ಲಾ ಕಚೇರಿ ಉದ್ಘಾಟನೆ ಮತ್ತು ಪಕ್ಷ ಸಂಘಟನೆ ಕೆಲಸದ ಮೇಲೆ ಇಂದು ಕೋಲಾರಕ್ಕೆ ಭೇಟಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ನನಗೆ ಅಲ್ಲಿ ಬಹಳ ಬೇಸರ ಮತ್ತು ಆತಂಕದ ವಿಚಾರ ಕಂಡಿತು.

ನಗರದ KSRTC ಬಸ್ ನಿಲ್ದಾಣದ ಬಳಿಯೇ ಇರುವ ಪಕ್ಷದ ನೂತನ ಜಿಲ್ಲಾ ಕಚೇರಿ ಉದ್ಘಾಟನೆಯ ನಂತರ ಕೋಲಾರ ತಾಲ್ಲೂಕು ಕಚೇರಿಗೆ ಭೇಟಿ ಕೊಟ್ಟು ಅಲ್ಲಿ “ಲಂಚಮುಕ್ತ ಕರ್ನಾಟಕ” ಅಭಿಯಾನ ನಡೆಸಿ ಆ ಕಚೇರಿಯ ಲೋಪದೋಷಗಳ ಪಟ್ಟಿ ಮಾಡಿ ಗ್ರೇಡ್-2 ತಹಸೀಲ್ದಾರ್ ಮೂಲಕ ತಹಸೀಲ್ದಾರರಿಗೆ ನೀಡಲಾಯಿತು. ಅದಾದ ನಂತರ ಅಲ್ಲಿಯೇ ಊಟ ಮುಗಿಸಿಕೊಂಡು ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರ ಇರುವ KSRTC ಬಸ್ ನಿಲ್ದಾಣದ ತನಕ ದಾರಿಯುದ್ದಕ್ಕೂ ನಡೆದುಕೊಂಡು ಜನರಿಗೆ ಕರಪತ್ರ ಹಂಚುತ್ತಾ, ಅವರನ್ನು ಮಾತನಾಡಿಸುತ್ತಾ, ನಮ್ಮನ್ನು ಬೆಂಬಲಿಸಬೇಕು ಎಂದು ಮನಸ್ಸಿದ್ದವರ ಸದಸ್ಯತ್ವ ಮಾಡಿಸುತ್ತಾ ಬಂದೆವು.

ಅದು ಮಧ್ಯಾಹ್ನ 2:30 ರಿಂದ 3:30 ರ ಸಮಯ. ಆ ಕಾಲ್ನಡಿಗೆಯ ಸಂದರ್ಭದಲ್ಲಿ ಒಬ್ಬಿಬ್ಬರಲ್ಲ, ಹತ್ತಾರು ಜನ, ಯುವಕರಿಂದ ಹಿಡಿದು ವೃದ್ಧರವರೆಗೆ, ಮದ್ಯಪಾನ ಮಾಡಿ ಅಷ್ಟೊತ್ತಿಗಾಗಲೇ ಚಿತ್ ಆಗಿದ್ದವರು ಸಿಕ್ಕರು. ಒಬ್ಬಿಬ್ಬರು ನಮ್ಮನ್ನು ತಡವಿಕೊಂಡರು. ಒಬ್ಬನಂತೂ ನೇರವಾಗಿ ನಮ್ಮವರ ಮಧ್ಯೆ ನುಗ್ಗಿ ನನ್ನನ್ನು ಹಿಂದಿನಿಂದ ತಳ್ಳಿಯೇ ಬಿಟ್ಟ. ಅವನಿಗೆ ನಾವು ಯಾರು ಎನ್ನುವುದೂ ಸೇರಿದಂತೆ ಯಾವುದರ ಪರಿವೆಯೂ ಇರಲಿಲ್ಲ. ಮತ್ತೊಬ್ಬ ದೇಣಿಗೆ ಕೊಡಬೇಕು ಎಂದು ಖುಷಿಯಿಂದ ಬಂದವನು ಅದನ್ನು ಮಾಡಲು ಧಮಕಿ ಹಾಕಿಕೊಂಡೇ ಬಂದ.

ನನ್ನ ಇಷ್ಟೂ ದಿನಗಳ ಅನುಭವದಲ್ಲಿ ರಾಜ್ಯದ ಯಾವುದೇ ಊರಿನಲ್ಲಿ ಹೀಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಧ್ಯಾಹ್ನಕ್ಕೆಲ್ಲ ಕುಡಿದು ತೂರಾಡುವ ಜನರನ್ನು ನಾನು ಕಂಡಿಲ್ಲ. ಇದು ಅಪಾಯಕಾರಿ ಬೆಳವಣಿಗೆ. ಇದು ಅಪರೂಪದ ದಿನವೋ ಅಥವ ಇಲ್ಲಿ ಬೇರೆ ಏನಾದರೂ ಸ್ಥಳೀಯ ಸಮಾಜೋಆರ್ಥಿಕ ಕಾರಣಗಳಿವೆಯೇ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ನೀತಿನಿರೂಪಕರು ಅಭ್ಯಸಿಸಬೇಕು.

ಆದರೆ, ಜನಪ್ರತಿನಿಧಿಗಳೇ ಕುಡಿಸಿ ಜನರನ್ನು ಹಾಳು ಮಾಡುವ ಸದ್ಯದ ಸ್ಥಿತಿಯಲ್ಲಿ ಭ್ರಷ್ಟರನ್ನು ಮತ್ತು ದುಷ್ಟರನ್ನು ಪವಿತ್ರವಾದ ರಾಜಕೀಯದಿಂದ ಹೊರಹಾಕದೆ ಅಂತಹ ಯಾವ ಅಧ್ಯಯನಗಳೂ ನಮ್ಮಲ್ಲಿ ನಡೆಯುವುದಿಲ್ಲ ಮತ್ತು ಸಮಸ್ಯೆಗೆ ಸೂಕ್ತ ಪರಿಹಾರಗಳೂ ಸಿಗುವುದಿಲ್ಲ. KRS ಪಕ್ಷದಿಂದ ಮಾತ್ರ ಇಲ್ಲಿ ಏನಾದರೂ ಗುಣಾತ್ಮಕ ಬದಲಾವಣೆ ಬರಲು ಸಾಧ್ಯ.

ನಾವು ಸಕಾರಾತ್ಮಕ ಬದಲಾವಣೆ ಮಾಡಿಯೇ ತೀರುತ್ತೇವೆ. ಒಳ್ಳೆಯ ನಾಡನ್ನು ಕಟ್ಟಿಯೇ ಕಟ್ಟುತ್ತೇವೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ವಂದನೆಗಳೊಂದಿಗೆ,
– ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

Leave a Reply