ಮೀಸಲಾತಿ ವಿವಾದ ಸಂಘಪರಿವಾರದ ಕುಟಿಲ ರಾಜಕಾರಣ: ಸಿದ್ದರಾಮಯ್ಯ

5 years ago

ಬೆಂಗಳೂರು: ಮೀಸಲಾತಿ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತಾಧಿಕಾರದ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುತಂತ್ರ ಅಷ್ಟೆ,‌ ಇದರಲ್ಲಿ ಲವಲೇಶದಷ್ಟೂ ಪ್ರಾಮಾಣಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದವರು ತಮ್ಮನ್ನು 2ಎಗೆ ಸೇರಿಸಬೇಕು ಎಂದು, ಕುರುಬ ಸಮುದಾಯದವರು ತಮ್ಮನ್ನು ಎಸ್.ಟಿ.ಗೆ ಸೇರಿಸಬೇಕು ಎಂದು, ವಾಲ್ಮೀಕಿ ಸಮುದಾಯದವರು ಮತ್ತು ಒಕ್ಕಲಿಗ ಸಮುದಾಯದವರು ತಮ್ಮ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನೆ ಮತ್ತು ಹಕ್ಕೊತ್ತಾಯ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸಮಿತಿಯನ್ನು ರಚಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮೀಸಲಾತಿ ಬಿಕ್ಕಟ್ಟನ್ನು ಶಾಶ್ವತವಾಗಿ ಪರಿಹರಿಸುವ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿಗಳು ಹೊಂದಿದ್ದರೆ ಪೂರ್ಣಗೊಂಡು ಸಿದ್ಧ ಇರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಅನುಷ್ಠಾನಗೊಳಿಸಲಿ ಎಂದು ಸವಾಲೆಸೆದಿದ್ದಾರೆ.

ಮೀಸಲಾತಿ ಹೆಚ್ಚಳ ಮತ್ತು ಪ್ರವರ್ಗಗಳ ಬದಲಾವಣೆಯ ಬೇಡಿಕೆಯನ್ನು ಮೀಸಲಾತಿ ಹೆಚ್ಚಳದ ಮೂಲಕ ಮಾತ್ರ ಶಾಶ್ವತವಾಗಿ ಪರಿಹರಿಸಲು ಸಾಧ್ಯ. ರಾಜ್ಯ ಸರ್ಕಾರ‌ ತಕ್ಷಣ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಒತ್ತಾಯಿಸಬೇಕು ಎಂದಿದ್ದಾರೆ.

ಈಗ ಎದ್ದಿರುವ ಮೀಸಲಾತಿ ವಿವಾದ ಬಿಜೆಪಿ ಮತ್ತು ಸಂಘ ಪರಿವಾರದ ಕುಟಿಲ ರಾಜಕಾರಣದ ಫಲ. ಎಚ್ಚರ ವಹಿಸದೆ ಹೋದರೆ ಇವರು ಹಚ್ಚಿರುವ ವಿವಾದದ ಬೆಂಕಿಗೆ ಇವರೇ ಸ್ವಯಂ ಬಲಿಯಾಗಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply