ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಆರ್ ಎಸ್ ಎಸ್ ಹುನ್ನಾರ: ಸಿದ್ದರಾಮಯ್ಯ

4 years ago

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ಹಿಂದೆ ಜನರ ಹಿತ ಇಲ್ಲ. ದೇಶದ ಕೋಮುಸೌಹಾರ್ದತೆ ಹಾಳುಗೆಡಹುದೇ ಇದರ ದುರುದ್ದೇಶ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತಾಡಿದ ಅವರು, ಬಲಾತ್ಕಾರದ ಮತಾಂತರ‌ ಈಗಲೂ ಶಿಕ್ಷಾರ್ಹ ಅಪರಾಧವಾಗಿರುವಾಗ ಹೊಸ ಕಾಯ್ದೆಯನ್ನು ರಚಿಸುವುದು ಯಾವ  ಉದ್ದೇಶಕ್ಕೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರ ವಿರುದ್ಧ ಇತರರನ್ನು ಎತ್ತಿಕಟ್ಟುವ ದುರುದ್ದೇಶದಿಂದಲೇ ಬಿಜೆಪಿ ಈ ಕಾಯ್ದೆ ತರಲು ಹೊರಟಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಜಾತಿ-ಧರ್ಮದ ಭೇದವಿಲ್ಲದೆ ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಸಮುದಾಯಗಳ ಜೊತೆಗಿರುತ್ತದೆ. ಯಾವ ಸಮುದಾಯದವರಿಗೂ ತೊಂದರೆಯಾಗಲು ಅವಕಾಶ ನೀಡುವುದಿಲ್ಲ. ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಚೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಆಚರಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಕಾಯಿದೆ ತರುವುದು ಸಂವಿಧಾನಬಾಹಿರ ಎಂದರು.

ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಅಂತಹ ನಡೆಯನ್ನು ನಾವು ಸದನದ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ ಎಂದರು.

ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅವರು ನಡೆಸುವ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಒಂದು ಸಮುದಾಯದವರು ಮಾತ್ರ ಹೋಗುವುದಿಲ್ಲ. ಹೋಗುವ ಎಲ್ಲರೂ ಮತಾಂತರ ಆಗಿಲ್ಲ. ಅದಕ್ಕಾಗಿ ಬಲವಂತವೂ ನಡೆಯುತ್ತಿಲ್ಲ ಎಂದರು.

ಯಾವುದೋ ಒಂದು ಧರ್ಮವನ್ನು ಆಧಾರವಾಗಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಸಂವಿಧಾನದಿಂದ ಒಳ್ಳೆಯದಾಗಬೇಕಾದರೆ ಆಡಳಿತ ಒಳ್ಳೆಯವರ ಕೈಯ್ಯಲ್ಲೇ ಇರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು ಎಂದರು.

ಬಿಜೆಪಿಯವರಿಗೆ ಜಾತಿಭೇದ, ‌ಧರ್ಮಭೇದದಲ್ಲಿ ನಂಬಿಕೆ ಹೆಚ್ಚು. ಹೀಗಾಗಿಯೇ ಇಂಥ ಕಾಯಿದೆಗಳ ಜಾರಿಗೆ ಮುಂದಾಗಿದೆ. ಇದರಲ್ಲಿ ಆರ್ ಎಸ್ ಎಸ್ ನ ಹುನ್ನಾರವೂ ಅಡಗಿದೆ. “ದಯೆಯೇ ಧರ್ಮದ ಮೂಲ” ಎಂದು ಬಸವಣ್ಣ ಅವರು ಹೇಳಿದ್ದರು. ಆದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಚರ್ಚ್‌ಗಳ ಮೇಲೆ ದಾಳಿಯಾಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ ಎಂದರು.

ಮಾಜಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ರಾಜೇಗೌಡ, ವಿಜಯಸಿಂಗ್, ಪ್ರಕಾಶ್ ರಾಥೋಡ್, ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಡಾ. ಸಜ್ಜನ್ ಜಾರ್ಜ್ ಮತ್ತಿತರರು ಭಾಗವಹಿಸಿದ್ದರು.

Leave a Reply