ಹಾಸನ: ಕುಖ್ಯಾತ ರೌಡಿ ಪುಲ್ಲಿ ಅಲಿಯಾಸ್ ಸಂತೋಷ್ ನನ್ನು ಸ್ನೇಹಿತರು ಪಾರ್ಟಿಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಚಿಕ್ಕಮಗಳೂರು ಜಿಲ್ಲೆಯ ಕುರುವಂಗಿ ಗ್ರಾಮದ ಬಳಿಯ ಅರಣ್ಯದಲ್ಲಿ ಹೂತು ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ರೌಡಿ ಪುಲ್ಲಿ (36)ಯನ್ನು ಆತನ ಸ್ನೇಹಿತರೇ ಪಾರ್ಟಿ ಮಾಡಲು ಕರೆದುಕೊಂಡು ಹೋಗಿ ರೌಡಿಸಂನಲ್ಲಿ ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಕೊಲೆ ಮಾಡಿ ಅರಣ್ಯದಲ್ಲಿ ಮೃತ ದೇಹವನ್ನು ಹೂತು ಹಾಕಿ ವಾಪಾಸ್ ಹಾಸನಕ್ಕೆ ಬಂದಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕೃತ್ಯ ನಡೆಸಿದ ಪುಲ್ಲಿ ಸ್ನೇಹಿತರಾದ ಪ್ರೀತಮ್ ಮತ್ತು ಕೀರ್ತಿ ನನ್ನು ಬಂಧಿಸಿದ್ದಾರೆ.
ನಾಪತ್ತೆ ಪ್ರಕರಣ ದಾಖಲು: ಕಳೆದ ಫೆ.9 ರಂದು ಪುಲ್ಲಿ ಅಲಿಯಾಸ್ ಸಂತೋಷ್ ಕಾಣೆಯಾಗಿದ್ದು, ಈ ಕುರಿತಂತೆ ಹಾಸನದ ಬಡಾವಣೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಪೊಲೀಸರು ಆತನ ಫೋನ್ ಕರೆಗಳ ಮಾಹಿತಿ ಹಾಗೂ ನಗರದಲ್ಲಿರುವ ವಿವಿಧ ಸಿಸಿಟಿವಿ ಫೂಟೇಜ್ಗಳನ್ನು ಆಧರಿಸಿ ಕೊನೆಯ ಬಾರಿಗೆ ಯಾರೊಂದಿಗೆ ಹೋಗಿದ್ದಾನೆ ಎಂದು ಪತ್ತೆ ಮಾಡಿದ್ದಾರೆ.
ಆಗ ಸಂತೋಷ್ನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೃತ ರೌಡಿಶೀಟರ್ ಸಂತೋಷ್ 307 ಹಾಗೂ 302 ಪ್ರಕರಣಗಳಲ್ಲಿ ಆರೋಪಿಯಾಗಿದ್ದನು.
ಅಂತ್ಯ ಸಂಸ್ಕಾರ: ಅರಣ್ಯದಲ್ಲಿ ಹೂತು ಹಾಕಿದ್ದ ಶವವನ್ನು ಹೊರಕ್ಕೆ ತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಚಿಕ್ಕಮಗಳೂರು ಅರಣ್ಯದಲ್ಲೇ ರೌಡಿ ಪುಲ್ಲಿ ಅವರ ಕೆಲವು ಕುಟುಂಬ ಸದಸ್ಯರ ನೇತೃತ್ವದಲ್ಲಿ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದಾರೆ.




