ಬ್ಲೂಫಿಲಂ ತೋರಿಸಿದ್ದಕ್ಕೆ ಸಾಕ್ಷಿ ನೀಡಿದರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್

2 years ago

#Retirement #politics #Bluefilm #shows #evidence #DKSivakumar

ಬೆಂಗಳೂರು: ತಮ್ಮ ಒಡೆತನದಲ್ಲಿದ್ದ ಸಿನಿಮಾ ಮಂದಿರದಲ್ಲಿ ಬ್ಲೂಫಿಲಂ ತೋರಿಸಲಾಗುತ್ತಿತ್ತು ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಡಿದ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲೆಸೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರವಿಲ್ಲದೆ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಜನರ ನಡುವೆ ನಗೆ ಪಾಟಲಿಗೆ ಈಡಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜಕಾರಣದಲ್ಲಿ ನಾನು ಅಂತಹ ಕೆಲಸ ಮಾಡಿಲ್ಲ, ಮಾಡಿದ್ದನ್ನು ಸಾಬೀತುಪಡಿಸಿದರೆ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅವರ ತಂದೆ ತಮ್ಮ ವಿರುದ್ಧ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಆಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಂದರೆ ಒಂದು ಘನತೆ, ಗೌರವ ಇರಬೇಕು. ಕುಮಾರಸ್ವಾಮಿ ಹತಾಶರಾಗಿ ನೀಡುತ್ತಿರುವ ಹೇಳಿಕೆಗಳು ಅವರನ್ನು ನಾಚಿಕೆಗೀಡು ಮಾಡುತ್ತಿವೆ ಎಂದರು.

ಕುಮಾರಸ್ವಾಮಿಯವರು ಕನಕಪುರಕ್ಕೆ ಹೋಗಲಿ, ನಮ್ಮ ಪಕ್ಷದ ಕಾರ್ಯಕರ್ತರು ಬೇಡ, ಅವರ ಪಕ್ಷ ಕಾರ್ಯಕರ್ತರನ್ನೇ ಕೇಳಿ. ನನ್ನ ಬಗ್ಗೆ ತಿಳಿದುಕೊಳ್ಳಲಿ. ಕನಕಪುರದ ಜನ ನಾನು ಚುನಾವಣೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡದೆ ಇದ್ದರೂ 1,23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈವರೆಗೂ ಸಾಕಿ ಸಲಹಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ನಡೆಸಿರುವವರು ಯಾರೇ ಆಗಿದ್ದರು ಇಂತಹ ಕೆಲಸ ಮಾಡಿದ್ದರೂ ಅದು ತಪ್ಪು. ಅಂತಹ ಕೀಳು ರಾಜಕಾರಣಕ್ಕೆ ನಾನು ಪ್ರೋತ್ಸಾಹ ಕೊಡುವುದಿಲ್ಲ ಎಂದರು.

Leave a Reply