ಭಾರತದಲ್ಲಿ ಮೀಸಲಾತಿಯ ಇತಿಹಾಸ: ಭಾಗ 4

4 years ago

ಜಾತಿ ಗಣತಿ

ಬ್ರಿಟಿಷರ ಆಡಳಿತದಲ್ಲಿ 1881 ರಿಂದ 1931 ರವರೆಗೆ ಜನಗಣತಿ ಹಾಗೂ ಜಾತಿಗಣತಿಯನ್ನು ನಡೆಸಲಾಯಿತು. ಸ್ವಾತಂತ್ರ್ಯ ಬಂದ ನಂತರ ಭಾರತ ಸರ್ಕಾರ 1948ರಲ್ಲಿ ಜನಗಣತಿ ಕಾಯ್ದೆಯನ್ನು ಜಾರಿಗೆ ತಂದಿತು.ನಮ್ಮ ಸಂವಿಧಾನದ ಅನುಚ್ಛೇದ 246ರಲ್ಲಿ ಜನಗಣತಿ ನಡೆಸುವುದು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇಂದು ಕೇಂದ್ರ ಸರ್ಕಾರ ಮಾತ್ರ ಜನಗಣತಿಯನ್ನು ನಡೆಸಬಹುದೇ ಹೊರತು ರಾಜ್ಯ ಸರ್ಕಾರಗಳಲ್ಲಿ ಜನಗಣತಿ ನಡೆಸುವ ಅಧಿಕಾರವಿಲ್ಲ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಮ್ಮ ದೇಶದಲ್ಲಿ ನಡೆಯುತ್ತದೆ. 1951 ರಿಂದ 2011 ರವರೆಗೆ ನಡೆದಿರುವ ಜನಗಣತಿಯ ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜಾತಿಗಣತಿ ನಡೆಸಲಾಗಿದೆ.

1992 ರಲ್ಲಿ ಮಂಡಲ್ ವರದಿ ಜಾರಿಗೆ ಬಂದು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲಾಯಿತು. 1968 ರಲ್ಲಿ ಕೇರಳ ಸರ್ಕಾರ ಜಾತಿ ಸಮೀಕ್ಷೆ ನಡೆಸಿ ಲಭ್ಯವಾದ ಮಾಹಿತಿಯನ್ನು ಬಳಸಿ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿರುವುದು ಇಂದು ಇತಿಹಾಸ. ಅದೇ ರೀತಿ ನ್ಯಾಷನಲ್ ಸ್ಯಾಂಪಲ್ ಸರ್ವೇ, ನ್ಯಾಷನಲ್ ಬಾಮಿಲೆಪ್ ಹೆಲ್ತ್ ಸರ್ವೇ ಮತ್ತು ಅಮೆಂಡ್‌ಮೆಂಟ್ ಆಫ್ ಅಗ್ರಿಕಲ್ಚರಲ್ ಹೋಮ್ ಹೋಲ್ಡ್ ಕೂಡ ಜಾತಿ ಸಮೀಕ್ಷೆಯನ್ನು ನಡೆಸಿವೆ. 2011 ರಲ್ಲಿ ಕೇಂದ್ರ ಸರ್ಕಾರ ಸುಮಾರು 5000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿದೆ.

ಮೀಸಲಾತಿಗೆ ಸಂಬಂಧಿಸಿದ ಕೆಲವು ಪ್ರಶ್ನೋತ್ತರಗಳು

(ಎ) ಎಲ್ಲರೂ ಸಮಾನರು ಎಂದು ನಮ್ಮ ಸಂವಿಧಾನವು ಸಾರುತ್ತದೆ. ಆದರೆ ಜಾತಿ ಆಧಾರಿತ ಮೀಸಲಾತಿ ಸಮಾನತೆಯ ವಿರೋಧಿಯಲ್ಲವೇ?

ಶ್ರಮ ವಿಭಜನೆಯಿಂದ ಪ್ರಾರಂಭದ ಮೊದಲು ಮೂರು ವರ್ಣಗಳು ಆಳುವವರಾಗಿ, ನಾಲ್ಕನೆಯವರು ಆಳಿಸಿಕೊಳ್ಳುವವರಾಗಿ ರೂಪುಗೊಂಡವು. ಈ “ಚಾತುರ್ವಣದ”ಹೊರಗೆ ಮತ್ತೊಂದು ಸಾಮಾಜಿಕ ವರ್ಗವನ್ನು ನಿರ್ಮಿಸಲಾಯಿತು. ಇವುಗಳೆಂದರೆ ಬುಡಕಟ್ಟು, ಆದಿವಾಸಿ ಬುಡಕಟ್ಟು ಹಾಗೂ ಅಸ್ಪೃಶ್ಯರು. ಇವರಿಗೆ ಕೊಳಕು ಕೆಲಸಗಳನ್ನು ಹಚ್ಚಿ ಅವುಗಳನ್ನು ಮಾಡುವ ವ್ಯಕ್ತಿಗೆ ಮೈಲಿಗೆಯನ್ನಂಟಿಸಿ, ಅವರನ್ನು ಮುಟ್ಟುವುದರಿಂದಲೇ ಮೈಲಿಗೆಯಾಗುತ್ತದೆ ಎನ್ನುವ ಪದ್ಧತಿಯನ್ನು ಹುಟ್ಟು ಹಾಕಲಾಯಿತು.

“Differential treatment among equals amounts to discrimination. But differential treatment among unequal’s will not amount to discrimination”

“ಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತ. ಆದರೆ ಅಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತವಲ್ಲ.”

(ಬಿ) ಸಂವಿಧಾನ ಜಾರಿಗೆ ಬಂದ 70 ವರ್ಷಗಳ ನಂತರವೂ ಮೀಸಲಾತಿ ಮುಂದುವರಿಸಿರುವುದು ಎಷ್ಟು ಸಮಂಜಸ?

ಅಸ್ಪೃಶ್ಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಸಾಕ್ಷರತೆ ಮತ್ತು ಶಿಕ್ಷಣದ ಪ್ರಮಾಣವು ಬಹಳ ಕೆಳಮಟ್ಟದಲ್ಲಿದೆ. ಇನ್ನೂ ಶೇ.30ರಷ್ಟು ಅಸ್ಪೃಶ್ಯರು ಅನಕ್ಷರಸ್ಥರಾಗಿದ್ದಾರೆ. ಪ್ರತಿ 100 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು 12ನೇ ತರಗತಿಯನ್ನು ಪಾಸು ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳನ್ನು ಶಾಲೆಯ ಕಟ್ಟಕಡೆಯ ಬೆಂಚುಗಳಲ್ಲಿ ಕೂರಿಸಲಾಗುತ್ತಿದೆ. ಅನೇಕ ಶಾಲೆಗಳಲ್ಲಿ ಸಹಭೋಜನ ನಿರಾಕರಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಅಸ್ಪೃಶ್ಯರ ಪ್ರಮಾಣ ಬಹಳ ಕಡಿಮೆ. ಅಸ್ಪೃಶ್ಯ ಮಹಿಳೆಯರ ಸಾಕ್ಷರತೆ ಪುರುಷರಿಗಿಂತ ಹೆಚ್ಚು ಶೋಚನೀಯವಾಗಿದೆ.

2011 ಮಾರ್ಚ್ ತಿಂಗಳಲ್ಲಿ ಅಂದಿನ ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿಯವರು ಸದನದಲ್ಲಿ ತಮ್ಮ ಲಿಖಿತ ಉತ್ತರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿಯ ಸ್ಥಿತಿಯನ್ನು ತಿಳಿಸಿದ್ದಾರೆ. ಅದರ ಮುಖ್ಯಾಂಶಗಳೆಂದರೆ:

  1. ಕೇಂದ್ರ ಸರ್ಕಾರದ ಮೇಲ್‌ಸ್ತರದ 149 ಕಾರ್ಯದರ್ಶಿಗಳ ಪೈಕಿ ಪರಿಶಿಷ್ಟ ಜಾತಿಯವರು ಯಾರೂ ಇಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದವರು 4 ಮಾತ್ರ.
  2. 108 ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯವರು 1 ಮತ್ತು ಪರಿಶಿಷ್ಟ ಪಂಗಡದವರು 2 ಮಾತ್ರ.
  3. 477 ಜಂಟಿ ಕಾರ್ಯದರ್ಶಿಗಳ ಪೈಕಿ 31 ಪರಿಶಿಷ್ಟ ಜಾತಿಯವರು ಮತ್ತು 15 ಪರಿಶಿಷ್ಟ ಪಂಗಡದವರು.
  4. 590 ನಿರ್ದೇಶಕರ ಪೈಕಿ 17 ಪರಿಶಿಷ್ಟ ಜಾತಿ ಮತ್ತು 7 ಪರಿಶಿಷ್ಟ ಪಂಗಡಕ್ಕೆ ಸೇರಿದವರು.
  5. ಐಎಎಸ್, ಐಪಿಎಸ್, ಐಎಫ್‌ಎಸ್, ಐಆರ್‌ಎಸ್ ಇತ್ಯಾದಿಗಳಲ್ಲಿ ಶೇ. 13.5 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.3 ರಷ್ಟು ಪರಿಶಿಷ್ಟ ಪಂಗಡದವರು.
  6. ಗ್ರೂಪ್ ‘ಎ’ಅಧಿಕಾರಿಗಳಲ್ಲಿ ಶೇ. 11.1 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 4.6 ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಬಿ’ಅಧಿಕಾರಿಗಳಲ್ಲಿ ಶೇ. 14.3 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 5.5ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಸಿ’ನಲ್ಲಿ ಶೇ. 16ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.8ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಡಿ’ನಲ್ಲಿ ಶೇ. 19.3 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್ ‘ಡಿ’ನಲ್ಲಿ ಈ ವರ್ಗಕ್ಕೆ ಸೇರಿದವರು ಯಾಕೆ ಹೆಚ್ಚಾಗಿದ್ದಾರೆಂದರೆ, ಶೇ. 40ರಷ್ಟು ಉದ್ಯೋಗಿಗಳು ಸಫಾಯಿ ಕರ್ಮಚಾರಿಗಳು.

ಸಿ) ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?

ಪ.ಜಾ. ಮತ್ತು ಪ.ಪಂ.ದವರು 1955 ರಿಂದ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಾ ಬಂದಿದ್ದಾರೆ. 16-11-1992 ರಂದು ಸರ್ವೋಚ್ಛ ನ್ಯಾಯಾಲಯವು ‘ಇಂದಿರಾ ಸಹಾನಿ’ಪ್ರಕರಣದಲ್ಲಿ ತೀರ್ಪನ್ನು ನೀಡಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಶೇ.27 ರಷ್ಟು ನೀಡಿದ್ದ ಮೀಸಲಾತಿಯನ್ನು ಎತ್ತಿ ಹಿಡಿದು ಕೆಲವು ಷರತ್ತುಗಳನ್ನು ವಿಧಿಸಿತು. ಅವುಗಳೆಂದರೆ:

  1. ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದು.
  2. ಕೆನೆಪದರದ ನೀತಿ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸಬೇಕು.
  3. ಕೆನೆಪದರದ ನೀತಿ ಪ.ಜಾ.ಮತ್ತು ಪ.ಪಂ.ಕ್ಕೆ ಅನ್ವಯವಾಗುವುದಿಲ್ಲ.

1995 ರಲ್ಲಿ ಸಂವಿಧಾನಕ್ಕೆ 77ನೇ ತಿದ್ದುಪಡಿ ತಂದು ಅನುಚ್ಛೇದ 16(4ಎ) ನ್ನು ಸೇರಿಸುವುದರ ಮುಖಾಂತರ ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿತು. 2000 ರಲ್ಲಿ ಸಂವಿಧಾನದ 81ನೇ ತಿದ್ದುಪಡಿ ಮೂಲಕ ಅನುಚ್ಛೇದ 16(4ಬಿ)ಯನ್ನು ಸೇರಿ ಮೀಸಲಾತಿ ಮಿತಿ ಬ್ಯಾಕ್ ಲಾಗ್ ಹುದ್ದೆಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದೆ. ಮುಂದುವರೆದು 2000ರಲ್ಲಿ ಸಂವಿಧಾನದ 82ನೇ ತಿದ್ದುಪಡಿ ತಂದು ಅನುಚ್ಛೇದ 335ಕ್ಕೆ ಒಂದು Proviso ಸೇರಿಸಿ ಸರ್ಕಾರವು ಪ.ಜಾ. ಮತ್ತು ಪ.ಪಂ.ದವರಿಗೆ ಬಡ್ತಿ ನೀಡುವ ವಿಚಾರದಲ್ಲಿ ರಿಯಾಯಿತಿಗಳನ್ನು ನೀಡಬಹುದೆಂದು ತಿಳಿಸಿತು. ನಂತರ 2011 ರಲ್ಲಿ ಸಂವಿಧಾನದ 85ನೇ ತಿದ್ದುಪಡಿ ತಂದು ಮೀಸಲಾತಿಯಿಂದ ಬಡ್ತಿ ಪಡೆದವರು ತತ್ಪರಿಣಾಮ ಸೇವಾ ಜ್ಯೇಷ್ಠತೆಗೂ ಅರ್ಹರೆಂದು ಹೇಳಿತು.

ಸಂವಿಧಾನದ 77, 81, 82 ಹಾಗೂ 85ನೇ ತಿದ್ದುಪಡಿಗಳನ್ನು ಎಂ.ನಾಗರಾಜ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 2006 ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿ ಸಂವಿಧಾನದ ಈ ನಾಲ್ಕೂ ತಿದ್ದುಪಡಿಗಳನ್ನು ಊರ್ಜಿತವೆಂದು ಎತ್ತಿ ಹಿಡಿಯಿತು. ಆದರೆ, ಕೆಳಗಿನ ಕೆಲವು ನಿಬಂಧನೆಗಳನ್ನು ಸೂಚಿಸಿತು:

  1. ಸರ್ಕಾರ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂಬುದು ಕಡ್ಡಾಯವಿಲ್ಲ.
  2. ಒಂದು ವೇಳೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂದಾದರೆ ಕೊಡಲೇಬೇಕಾದ ಅನಿವಾರ್ಯತೆಯನ್ನು ಪ್ರತಿಯೊಂದು ಪ್ರಕರಣದಲ್ಲಿ ತೋರಿಸಬೇಕು.
  3. ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ ಎಂದು ಖಾತರಿಪಡಿಸಿಕೊಳ್ಳಬೇಕು.
  4. ಈ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕದಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
  5. ಈ ರೀತಿ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವುದರಿಂದ ಆಡಳಿತದ ಕಾರ್ಯ ದಕ್ಷತೆಗೆ ಧಕ್ಕೆ ಆಗಬಾರದು.
  6. ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು.

ಬಿ.ಕೆ. ಪವಿತ್ರ – ಈ ಪ್ರಕರಣದಲ್ಲಿ 117ನೇ ತಿದ್ದುಪಡಿಯನ್ನು 2012ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿತು. ಆದರೆ ಕಾರಣಾಂತರಗಳಿಂದ ಲೋಕಸಭೆಯಲ್ಲಿ ಇನ್ನೂ ಪಾಸ್ ಮಾಡಿಲ್ಲ. ಸರ್ಕಾರವು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ, ಸಂವಿಧಾನದ 117ನೇ ತಿದ್ದುಪಡಿ ತರುವುದರ ಮುಖಾಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

ಸುಮಾರು 2000 ವರ್ಷಗಳ ಕಾಲ ಈ ಸಮುದಾಯಗಳಿಗೆ ಶಿಕ್ಷಣ, ಆಸ್ತಿಯ ಹಕ್ಕು, ಆಡಳಿತದಲ್ಲಿ ಭಾಗವಹಿಸುವಿಕೆ, ಸೈನ್ಯದಲ್ಲಿ ಸ್ಥಾನಮಾನ ಇತ್ಯಾದಿಗಳಿಂದ ವಂಚಿಸಲಾಯಿತು.

ಓ. ಚಿನ್ನಪ್ಪ ರೆಡ್ಡಿಯವರು 1985ರಲ್ಲಿ ವಸಂತ ಕುಮಾರ್ ಪ್ರಕರಣದಲ್ಲಿ ಬಡ್ತಿಯಲ್ಲಿ ಯಾಕೆ ಮೀಸಲಾತಿ ಬೇಕು ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ.

ಮೀಸಲಾತಿಯ ಮಾತು ಬಂದಾಗಲೆಲ್ಲ, ಸವಲತ್ತು ಪಡೆದವರು, ದಕ್ಷತೆ ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಒಟ್ಟು ಮೀಸಲಾತಿಯ ಶೇ.50 ರ ಮಿತಿಯನ್ನು ಮೀರಿದರೆ ದಕ್ಷತೆಯು ಏರುಪೇರಾಗಿ ಬಿಡುತ್ತದೆ. ಮುಂದುವರೆಸುವ (ಕ್ಯಾರಿಫಾವರ್ಡ್) ನಿಯಮವನ್ನು ಅಳವಡಿಸಿಕೊಂಡರೆ ದಕ್ಷತೆಯು ನಷ್ಟವಾಗಿಬಿಡುತ್ತದೆ. ಬಡ್ತಿಯ ಹುದ್ದೆಗಳಿಗೆ ಮೀಸಲಾತಿಯ ನಿಯಮವನ್ನು ಅನ್ವಯಿಸಿದರೆ ದಕ್ಷತೆಗೆ ಧಕ್ಕೆಯಾಗಿಬಿಡುತ್ತದೆ ಎಂಬುದು ಅವರ ಅಂಬೋಣ.

ಡಿ) ಕೆನೆಪದರ ನೀತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಯಾಕೆ ಅನ್ವಯಿಸಬಾರದು?

ಸ್ವಾತಂತ್ರ್ಯ ಬಂದು 75ಕ್ಕೂ ಹೆಚ್ಚು ವರ್ಷಗಳಾದರೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಹುಸಂಖ್ಯಾತ ಜನರ ಬದುಕು ಇನ್ನೂ ಹಸನಾಗಿಲ್ಲದಿರುವುದರಿಂದ ಹಾಗೂ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಜನವರ್ಗವನ್ನು ಇನ್ನೂ ಕೆಳಸ್ತರದ ಜನರನ್ನಾಗಿ ನೋಡುವುದರಿಂದ ಕೆನೆಪದರ ಎನ್ನುವುದನ್ನು ಈ ವರ್ಗಗಳಿಗೆ ಅನ್ವಯಿಸಲು ಇನ್ನೂ ಕಾಲ ಪಕ್ವವಾಗಿಲ್ಲ.

1971 ರಲ್ಲಿ ತಮಿಳುನಾಡು ಸರ್ಕಾರ ‘ಶ್ರೀ ಸಟ್ಟನಾಥನ್ ಆಯೋಗ’ವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕೊಡುವ ವಿಚಾರದಲ್ಲಿ ವರದಿಯನ್ನು ಪಡೆಯಿತು.

ವಾರ್ಷಿಕ ಆದಾಯ 2 ಲಕ್ಷ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಇದ್ದವರಿಗೆ ಮೀಸಲಾತಿ ಸೌಲಭ್ಯವನ್ನು ನಿರಾಕರಿಸಲಾಯಿತು.

1977 ರಲ್ಲಿ ಕೇಂದ್ರ ಸರ್ಕಾರ ಬಿ.ಪಿ.ಮಂಡಲ್ ರವರನ್ನು ಎರಡನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. 1990ರಲ್ಲಿ ಮಂಡಲ್ ರವರು ತಮ್ಮ ವರದಿಯನ್ನು ಸಲ್ಲಿಸಿದರು, ಕೇಂದ್ರ ಸರ್ಕಾರ ಮಂಡಲ್ ವರದಿಯ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೂ ಸಹ ಶೇ.27ರಷ್ಟು ಮೀಸಲಾತಿಯನ್ನು ಕಲ್ಪಿಸಿತು.

(ಇ) ಮೀಸಲಾತಿಯು ಪ್ರತಿಭೆಯ ವಿರೋಧಿ ಅಲ್ಲವೇ? ಅಭಿವೃದ್ಧಿಗೆ ಹಿನ್ನಡೆ ಅಲ್ಲವೇ?

  • ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
  • (ಮುಂದುವರೆಯುವುದು)

Leave a Reply