ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಬಂಡಾಯದ ಬಿಸಿ

2 years ago

ಬೆಂಗಳೂರು: 2024ರ ಲೋಕಸಭಾ ಚುನಾವಣೆ ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ಸವಾಲು ತಂದೊಡ್ಡಿದೆ. ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾದ ಬೆನ್ನಲ್ಲೇ ಹಲವೆಡೆ ಬಂಡಾಯದ ಧಗೆ ಕಾಣಿಸಿಕೊಂಡಿದೆ.

ಪಕ್ಷದ ಹಿರಿಯ ನಾಯಕರೇ ನಾಯಕತ್ವದ ವಿರುದ್ಧ ಬಹಿರಂಗ ಬಂಡಾಯ ಸಾರಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿದೆ. ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಸಂದೇಶ ನೀಡಿದ್ದು ಅವರೆಲ್ಲಾ ಈಗ ಬಂಡಾಯದ ಬಾವುಟ ಹಾರಿಸಲು ಸಜ್ಜುಗೊಂಡಿದ್ದಾರೆ.

ಇದರ ನಡುವೆ ಬಿಜೆಪಿ ಟಿಕೆಟ್ ವಂಚಿತರಾಗುತ್ತಿರುವ ಮೂವರು ಸಂಸದರು ಕಾಂಗ್ರೆಸ್ ಸೇರಲು ಸಜ್ಜುಗೊಂಡಿದ್ದಾರೆ. ಈ ಸಂಬಂಧ ಅವರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

ವಿದಾಯ ಹೇಳಿದ ಡಿ.ವಿ.ಸದಾನಂದಗೌಡ: ಈ ಕುರಿತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡ, ತಮ್ಮ ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಿ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಸುಳಿವು ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.

ಫೇಸ್ ಬುಕ್ ಪೋಸ್ಟ್ ನಲ್ಲಿ ಸದಾನಂದ ಗೌಡ ಅವರು, ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು ಎಂದಿದ್ದಾರೆ.

ಇವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ಯುವ ಮುಖಂಡ ನಿರಂತರ ಗಣೇಶ್ ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಶ್ವರಪ್ಪ ಹಾರಿಸಿದ ಬಂಡಾಯದ ಬಾವುಟ: ಇದೇ ವೇಳೆ ಹಾವೇರಿ – ಗದಗ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವ, ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಒಂದು ವೇಳೆ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದರೆ ಸದ್ಯದಲ್ಲೇ ಬೆಂಬಲಿಗರ ಕರೆದು ಸಭೆ ನಡೆಸಿ ಅವರಿಂದ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಆಗಿ ನಿಲ್ಲಲು ಬೆಂಬಲಿಗರಿಂದ ಒತ್ತಾಯವಿದೆ. ಅವರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು.

ಇದು ನನ್ನ ರಾಜಕೀಯ ಭವಿಷ್ಯ. ಇದು ರಾಜ್ಯದ ರಾಜಕೀಯದ ಭವಿಷ್ಯ. ರಾಜ್ಯದೆಲ್ಲೆಡೆಯಿಂದ ಹಿತೈಷಿಗಳು ನನಗೆ ಕರೆ ಮಾಡಿ ತಮಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಾಕಷ್ಟು ತಪ್ಪು ಆಗಿದೆ. ಈ ಹಿನ್ನೆಲೆಯಲ್ಲಿ ಸೋಲು ಆಗಿತ್ತು. ಅದನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅವರ ಅಭಿಪ್ರಾಯ ಕೇಳುತ್ತೇನೆ. ಬಳಿಕ ನಾನು ಸ್ಪರ್ಧೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.

ಹೊನ್ನಾಳಿ ರೇಣುಕಾಚಾರ್ಯ ಬಂಡಾಯ: ಮತ್ತೊಂದೆಡೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ
ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅಥವಾ ಅವರ ಕುಟುಂಬದ ಸದಸ್ಯರಿಗೆ ಬಿಜೆಪಿ ಟಿಕೆಟ್ ನೀಡಲು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ಷೇಪ ಎತ್ತಿದ್ದಾರೆ. ವಿರೋಧ ಲೆಕ್ಕಿಸದೇ ಒಂದು ವೇಳೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಕ್ಷೇತ್ರದ ಕಾರ್ಯಕರ್ತರು, ಮುಖಂಡರ ವಿರೋಧವಿದೆ. ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಎದುರಿಸಬೇಕಾಗುತ್ತದೆ. ಜಿಲ್ಲೆಯ ಜನರ ಅಪೇಕ್ಷೆಯಂತೆ ನನಗೆ ಇಲ್ಲವೇ, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಅವರ ಪುತ್ರ ಡಾ.ರವಿಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದರು.

ನನಗೆ ಟಿಕೆಟ್ ನೀಡಬೇಕು ಎನ್ನುವುದು ಇಡೀ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯ. ನನಗೆ ಜಾತಿ ಇಲ್ಲದೆ ಇರಬಹುದು, ಅವರಿಗಿಂತ ಹೆಚ್ಚಿನ ನೀತಿ ಇದೆ. ಜನರ ಪ್ರೀತಿ ಇದೆ. ಜಾತ್ಯತೀತವಾಗಿ ಜನ ಬೆಂಬಲಿಸುತ್ತಾರೆ ಎಂದರು.

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಮಂಜುನಾಥ್ ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.

Leave a Reply