ಡಾ.ಬಿ.ಆರ್. ಅಂಬೇಡ್ಕರ್ ಅವರು 1952 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಮದಾಸ್‌ಪುರ ಮತ್ತು ಜಲಂಧರ್‌ನಲ್ಲಿ ಲಕ್ಷಾಂತರ ದಲಿತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಯುಗಯುಗಾಂತರಗಳಿಂದ ತಮ್ಮನ್ನು ಬದಿಗೊತ್ತಿ ಅಸ್ತಿತ್ವದಲ್ಲಿರುವ ರಾಜಕೀಯ ವ್ಯವಸ್ಥೆಗೆ ತಮ್ಮದೇ ಆದ ಪರ್ಯಾಯವನ್ನು ನಿರ್ಮಿಸಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ 21 ವರ್ಷದ ಯುವಕ ಅಂಬೇಡ್ಕರ್ ಅವರ ತೀವ್ರ ಪ್ರಭಾವಕ್ಕೆ ಒಳಗಾಗುತ್ತಾನೆ. ಅಂಬೇಡ್ಕರ್ ಅವರ ಈ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥಮಾಡಿಸಲು ಪಣ ತೊಡುತ್ತಾನೆ. ಆ ಯುವಕನಿಗೆ ಇದೀಗ 93 ವರ್ಷ. ಈಗಲೂ ಅಂಬೇಡ್ಕರ್ ಚಿಂತನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರೇ ನೈಜ ಅಂಬೇಡ್ಕರ್ ವಾದಿ ಲಹೋರಿ ರಾಮ್ ಬಲ್ಲೆ.
ಲಹೋರಿ ಬಲ್ಲೆ ಯವರು ಜುಲೈ 20, 1930 ರಲ್ಲಿ ಜಲಂಧರ್ ನಲ್ಲಿ ಜನಿಸಿದರು. ಅಂಬೇಡ್ಕರ್ ವಿಚಾರ ಮತ್ತು ದಲಿತ ಸಮುದಾಯಗಳ ವರ್ತಮಾನವನ್ನು ದಾಖಲಿಸಲು 1958 ರಲ್ಲಿ ಆರಂಭಿಸಿದ ‘ಭೀಮ್ ಪತ್ರಿಕೆ’ ಉರ್ದು ಮತ್ತು ಪಂಜಾಬ್ ಭಾಷೆಯಲ್ಲಿ ಈಗಲೂ ಮುದ್ರಣವಾಗುತ್ತಿದೆ.
1950 ರ ಹೊತ್ತಲ್ಲಿ ಅಂಬೇಡ್ಕರ್ ಹೋರಾಟಕ್ಕೆ ಜತೆಯಾಗಿದ್ದ ದಲಿತ ಸ್ವಯಂ ಸೇವಕರಲ್ಲಿ ಒಬ್ಬರಾದ ಲಹೋರಿ ರಾಮ್ ಬಲ್ಲೆ ಅವರು ಬಾಬಾ ಸಾಹೇಬರ ನೇರ ಪ್ರಭಾವಕ್ಕೆ ಒಳಗಾದವರು.
ಬಲ್ಲೆ ಮಾತನಾಡುತ್ತಾ “ಅಂಬೇಡ್ಕರ್ ಅವರು 1938 ರಲ್ಲಿ ನಾಸಿಕ್ ಭಾಷಣದಲ್ಲಿ ‘ಈ ದೇಶದ ಕಾರ್ಮಿಕರು ಎದುರಿಸಬೇಕಾದ ಎರಡು ಶತ್ರುಗಳೆಂದರೆ – ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ಎಂದು ಹೇಳಿದ್ದರು. ಹಾಗಾಗಿಯೇ ಅಂಬೇಡ್ಕರ್ ಅವರು ಈ ಸ್ಪಷ್ಟತೆಯಿಂದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರ ಪ್ರಕಾರ ಬೌದ್ಧ ಧರ್ಮವು ಅತ್ಯಂತ ವೈಜ್ಞಾನಿಕ ಧರ್ಮವಾಗಿತ್ತು. ಇದು ತುಳಿತಕ್ಕೊಳಗಾದವರ ಸಾಮಾಜಿಕ ಸ್ಥಾನಮಾನವನ್ನು ಉನ್ನತೀಕರಿಸುತ್ತದೆ ಎಂದು ಅವರು ನಂಬಿದ್ದರು. ಪ್ರಸ್ತುತ ಈಗ, ಅಂಬೇಡ್ಕರ್ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಲೇ ಇತ್ತ ಬ್ರಾಹ್ಮಣಶಾಯಿ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸುತ್ತಾರೆ. ಅವರ ಆದರ್ಶಗಳನ್ನು ಇಂದಿನ ರಾಜಕೀಯ, ಜಾತಿವಾದಿ ಮತ್ತು ಹಿಂದುತ್ವದ ಸಮರ್ಥಕರೆಂಬಂತೆ ತಿರುಚಲಾಗುತ್ತಿರುವುದು ದುರಂತ ಎಂದು ಆತಂಕ ವ್ಯಕ್ತ ಪಡಿಸುತ್ತಾರೆ.
– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು



