ಕರ್ನಾಟಕ ರಾಜ್ಯದಲ್ಲಿರುವುದು 224 ವಿಧಾನಸಭಾ ಕ್ಷೇತ್ರಗಳು, 75 ವಿಧಾನಪರಿಷತ್ತಿನ ಸ್ಥಾನಗಳು, 12 ರಾಜ್ಯಸಭಾ ಸ್ಥಾನಗಳು, 28 ಲೋಕಸಭಾ ಕ್ಷೇತ್ರಗಳು. ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಮಠಾಧಿಪತಿಗಳು ಹಾಗೂ ಜಾತಿಯ ಸಂಘಟನೆಗಳು ಕನಿಷ್ಠ 50 ಸ್ಥಾನವನ್ನು ಚುನಾವಣೆಗಳಲ್ಲಿ ನಮಗೇ ನೀಡಬೇಕೆಂದು ಬೇಡಿಕೆಗಳನ್ನಿಡುತ್ತಾರೆ. ಇವರ ಎಲ್ಲಾ ಬೇಡಿಕೆಗಳ ಒಟ್ಟು ಲೆಕ್ಕ ಹಾಕಿದರೆ ವಿಧಾನಸಭೆಯ ಸದಸ್ಯರ ಸಂಖ್ಯೆ ಒಂದು ಸಾವಿರವನ್ನು ಮಾಡಿದರೂ ಸಾಕಾಗುವುದಿಲ್ಲ. ಅದೇ ರೀತಿಯಲ್ಲಿ ಕೇವಲ 34 ಜನ ಮಂದಿಯನ್ನಷ್ಟೆ ಮಂತ್ರಿಯನ್ನಾಗಿಸಬಹುದು. ಇಲ್ಲಿಯೂ ಮಠಾಧಿಪತಿಗಳು, ಜಾತಿಯ ನಾಯಕರುಗಳು ಇರುವ ಬೇಡಿಕೆ, ತರುವ ಒತ್ತಾಯ ಇವುಗಳನ್ನು ಲೆಕ್ಕ ಹಾಕಿದರೆ ಮಂತ್ರಿಮಂಡಲದ ಸಂಖ್ಯೆ 100ನ್ನು ದಾಟಿಸಿದರೂ ಸಾಲುವುದಿಲ್ಲ.
ಇನ್ನು ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿ ಮಾಡಲಷ್ಟೇ ಸಾಧ್ಯವಿದೆ. ಆದರೆ ಬೇಡಿಕೆಗಳನ್ನು ನೋಡುತ್ತಿದ್ದರೆ ಆರು ತಿಂಗಳಿಗೊಬ್ಬರನ್ನು ಮುಖ್ಯಮಂತಿಗಳನ್ನಾಗಿಸಿದರು. ಎಲ್ಲಾ ವರ್ಗದವರನ್ನು ಸಂತೃಪ್ತಿ ಪಡಿಸಲು ಸಾಲುವುದಿಲ್ಲ. ಇನ್ನು ಡಿ.ಸಿ.ಎಂ.ಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಜಿಲ್ಲೆಗೆ ಒಬ್ಬೊಬ್ಬರನ್ನೂ ನೇಮಕ ಮಾಡಿದರೂ ಸಮಧಾನವಾಗುವುದಿಲ್ಲ. ಖಾದಿ ಬಟ್ಟೆ ಧರಿಸಿದವರೆಲ್ಲ ಶಾಸಕರಾಗಲೇಬೇಕು. ಶಾಸಕರಾದವರೆಲ್ಲ ಮಂತ್ರಿಗಳಾಗಲೇ ಬೇಕು. ಒಂದು ಬಾರಿ ಮಂತ್ರಿಯಾದವರೆಲ್ಲ ಮುಖ್ಯಮಂತ್ರಿಗಳಾಗಲೇಬೇಕು. ಇಲ್ಲದಿದ್ದರೆ ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗಬೇಕು. ಈ ರೀತಿಯ ಆಸೆ, ನಿರೀಕ್ಷೆಗಳು ಎಲ್ಲರಲ್ಲೂ ಇದೆ. ಇದಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಖಾವಿಧಾರಿಗಳು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುತ್ತಾರೆ.
ಹೆಸರಿಗೆ ಮಾತ್ರ ಎಲ್ಲರೂ ಜಾತ್ಯತೀತರೇ, ಆದರೆ ತಮ್ಮ ಜಾತಿಯವರಿಗೆ ಮಾತ್ರ ಸ್ಥಾನಮಾನಗಳು ಸಿಗಲೇಬೇಕು. ಅಲ್ಲಿಯೂ ಪ್ರತಿಭೆಗಳಿಗಲ್ಲ ಇವರ ಹತ್ತಿರದವರಿಗೆ ಇಲ್ಲದಿದ್ದರೆ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಮತ್ತೊಂದು ದೊಡ್ಡ ಮಾತುಗಳು ಬರುತ್ತದೆ.
ಇದು ಸಾಲದು ಎಂಬಂತೆ ನಮ್ಮ ಜಾತಿಯ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿಲ್ಲವೆಂಬ ಟೀಕೆಗಳು, ಅಸಮಾಧಾನಗಳು ಮಾತಿನ ಸ್ವರೂಪದಲ್ಲಿ ಹೊರಬರುತ್ತಿದೆ. ಅಧಿಕಾರಿಗಳು ಯಾವ ಜಾತಿಯವರಾದರೂ ಏನಾಗಬೇಕಾಗಿದೆ? ಅವರು ಎಷ್ಟರಮಟ್ಟಿಗೆ ಜನರಿಗೆ ಸ್ಪಂದಿಸುತ್ತಾರೆ, ದಕ್ಷತೆಯಿಂದ ದುಡಿಯುತ್ತಾರೆ ಎನ್ನುವುದಷ್ಟೇ ಮಾನದಂಡವಾಗಿರಬೇಕು.
ಭ್ರಷ್ಟಾಚಾರಿಗಳು, ಅಯೋಗ್ಯರು, ದುರಹಂಕಾರಿಗಳು ಯಾವ ಜಾತಿಯವರಾದರೇನೂ ಇವರಿಂದ ಸರ್ಕಾರಕ್ಕೂ ಪ್ರಯೋಜನವಿಲ್ಲ, ಇನ್ನು ಜನರಿಗೂ ಅನುಕೂಲವಿಲ್ಲ. ಜನ ಬಯಸುವುದು ಜಾತಿವಂತ ಅಧಿಕಾರಿಯನ್ನೆಲ್ಲಾ ನೀತಿಯಂತ ಅಧಿಕಾರಿಯನ್ನಷ್ಟೇ.
ಎಲ್ಲಾ ಕಡೆಯಲ್ಲೂ ಜಾತಿಯ ವಿಚಾರವನ್ನು ಪ್ರಸ್ತಾಪ ಮಾಡುವ ನಾಯಕರುಗಳು ಬೆವರು ಸುರಿಸಿ ದುಡಿಯುವ ಕಾಯಕದಲ್ಲಿ ನಮ್ಮವರಿಲ್ಲ ಎಂದು ಎಂದಾದರೂ ಕೊರಗಿದ್ದಾರಾ. ಇಂತಹ ಮಾತುಗಳು ಸಮಾಜದಲ್ಲಿ ಇನ್ನು ಬಳಕೆಯಲ್ಲಿರುವುದು ನಾಚಿಕೆಯ ಸಂಗತಿ.
- ಕೆ.ಎಸ್. ನಾಗರಾಜ್, ಬೆಂಗಳೂರು




