ಕಿ.ರಂ. ಮೊದಲು ಎದೆಗೆ ಬಿದ್ದದ್ದು
ದೊಡ್ಡಬಳ್ಳಾಪುರ ತಾಲೂಕಿನ ಮನೆಮನೆಗಳ ವೈದ್ಯರಾಗಿದ್ದವರು ಡಾ. ವೆಂಕಟರೆಡ್ಡಿ. ಪದವಿ ಮುಗಿದ ನಂತರ ಯಾವುದೋ ಕಾರಣಕ್ಕಾಗಿ ಅವರನ್ನು ಬೇಟಿ ಮಾಡಿದ್ದೆ. ನನ್ನ ಪದವಿ ಮುಗಿದಿರುವ ಸುದ್ದಿ ತಿಳಿದಿದ್ದ ಅವರು ಮುಂದೇನು ಮಾಡುವೆ? ಎಂದರು. ಕನ್ನಡ ಎಂಎ ಮಾಡುವುದಾಗಿ ಹೇಳಿದೆ. ಅವರು, ಆಯ್ತು ಎಂಎ ಮಾಡು ಎಂದರು. ಹಾಗೆ ಹೇಳುತ್ತಲೇ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಿದ್ದಲಿಂಗಯ್ಯ, ಬರಗೂರು ಇದ್ದಾರೆ. ಹಾಗೆಯೇ ಕಿರಂ ನಾಗರಾಜ ಇದ್ದಾರೆ ಎಂದೆಲ್ಲ ಹೇಳಿದರು. ಕನ್ನಡ ಚಳವಳಿ ಮತ್ತು ರೈತ ಚಳವಳಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದ ಡಾಕ್ಟರಿಗೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯದ ಪರಿಚಯವಿತ್ತು. ನಮ್ಮೂರಿನ ರೈತರನ್ನು ಸಂಘಟಿಸುತ್ತಿದ್ದರು. ಆಗಶ್ಟೇ ಅವರು ಕನ್ನಡ ಪಕ್ಶದ ಚಟುವಟಿಕೆಗಳಿಂದ ರೈತ ಚಳವಳಿಯ ಕಡೆಗೆ ಚಲಿಸುತ್ತಿದ್ದರು. ಈ ಹೊತ್ತಿನಲ್ಲಿ ಅವರು ರೈತಚಳವಳಿಗೆ ಜನರನ್ನು ಸಜ್ಜುಗೊಳಿಸುತ್ತಿದ್ದರು. ಇವರ ಕಾರಣದಿಂದಾಗಿಯೇ 1992ರಲ್ಲಿ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಜಾಗತೀಕರಣ ವಿರೋಧಿ ಹೋರಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಆ ಕಾರ್ಯಕ್ರಮ ವಿಧಾನಸೌಧದ ಮುಂದಿರುವ ಗೋಪಾಲಗೌಡ ವೃತ್ತದ ಬಳಿ ಕಬ್ಬನ್ ಪಾರ್ಕಿನಲ್ಲಿ ನಡೆದಿತ್ತು. ಸಾವಿರಾರು ಜನರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಮ್ಮೂರಿನಿಂದ ನೂರಕ್ಕು ಹೆಚ್ಚು ಜನ ಭಾಗವಹಿಸಿದ್ದರು. ಆ ಗುಂಪಿನಲ್ಲಿ ನಾನೂ ತೂರಿಕೊಂಡಿದ್ದೆ. ಗ್ಯಾಟ್, ಡಂಕೆಲ್ ಮುಂತಾದ ಪದಗಳನ್ನು ಕೇಳಿಸಿಕೊಂಡಿದ್ದು; ಪ್ರೊ. ನಂಜುಂಡಸ್ವಾಮಿಯವರ ಭಾಶಣವನ್ನು ಕೇಳಿದ್ದು ಅದೇ ಮೊದಲು.
ಹಾಗಾಗಿ ಡಾಕ್ಟರ್ ರೆಡ್ಡಿಯವರಿಗೆ ಕನ್ನಡ ಅಧ್ಯಯನ ಕೇಂದ್ರದ ಪರಿಚಯವಿತ್ತು. ಅವರು ಸಿದ್ದಲಿಂಗಯ್ಯನವರನ್ನು ಭೇಟಿ ಮಾಡಲು ಆಗಾಗ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿಯೂ ಹೇಳಿದರು. ಅಂದರೆ ಕಿ.ರಂ. ನಾಗರಾಜ ಅವರ ಹೆಸರನ್ನು ಡಾಕ್ಟರ್ ರೆಡ್ಡಿಯವರಿಂದಲೇ ಮೊದಲು ಕೇಳಿದ್ದು. ಆ ನಂತರ ನಮ್ಮ ಸ್ನೇಹಿತರ ಬಳಗದಲ್ಲಿ ವೆಂಕಟೇಶ್ ನೆಲ್ಲುಕುಂಟೆ, ಶ್ರೀನಿವಾಸಮೂರ್ತಿ ಪಿ, ಪ್ರೇಮ, ಶಾಂತರಾಜ, ಪರಂಧಾಮ ಮುಂತಾದ ಸಾಹಿತ್ಯಾಸಕ್ತರು ಇದ್ದ ಕಾರಣ ಅಲ್ಲಿಯೂ ಕಿರಂ ಅವರ ಹೆಸರು ಪ್ರಸ್ತಾಪವಾಗಿ ಅಧ್ಯಯನ ಕೇಂದ್ರ ಪ್ರವೇಶಿಸುವ ಮೊದಲೇ ಕಿರಂ ಅವರ ಬಗೆಗೆ ಪರಿಚಯವಾಗಿತ್ತು. ಅವರ ಜೊತೆಗೆ ದೊಡ್ಡಬಳ್ಳಾಪುರದವರೇ ಆಗಿದ್ದ ಡಾ. ಡಿ. ಆರ್. ನಾಗರಾಜ್. ಡಾ. ಸಿ. ವೀರಣ್ಣ ಅವರ ಹೆಸರುಗಳೂ ಕೇಳಿದ್ದೆವು. ಹೀಗೆ ನಮ್ಮದೇ ಆದ ಕಲ್ಪನೆ ಮತ್ತು ಕನಸುಗಳೊಂದಿಗೆ ಕನ್ನಡ ಅಧ್ಯಯನ ಕೇಂದ್ರವನ್ನು ಪ್ರವೇಶಿಸಿದ್ದೆವು. ಆಗ ಅಲ್ಲಿ ದೊಡ್ಡ ವಿದ್ವಾಂಸರ ದಂಡೇ ಇತ್ತು. ಡಾ. ಎನ್.ಎಸ್. ಲಕ್ಶ್ಮೀನಾರಾಯಣ ಭಟ್ಟ, ಡಾ. ಹಂಪ ನಾಗರಾಜಯ್ಯ, ಡಾ. ಕೆ. ಮರುಳಸಿದ್ದಪ್ಪ. ಡಾ. ಬಸವರಾಜ ಕಲ್ಗುಡಿ, ಡಾ. ಎಸ್. ವಿದ್ಯಾಶಂಕರ್, ಡಾ. ಜಯದೇವ, ಡಾ. ಕೆ. ಪಿ. ಭಟ್, ಡಾ. ಕಾರ್ಲೋಸ್, ಪ್ರೊ. ಕಿ.ರಂ. ನಾಗರಾಜ್. ಡಾ. ಡಿ.ಆರ್. ನಾಗರಾಜ್ ಅವರು ಇದ್ದರು. ಅಶ್ಟೊತ್ತಿಗೆ ಡಾ. ಚಂದ್ರಶೇಖರ ಕಂಬಾರ, ಡಾ. ಕೆ. ವಿ. ನಾರಾಯಣ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಕಿ.ರಂ. ಅವರು ಕೂಡ ಕನ್ನಡ ವಿಶ್ವವಿದ್ಯಾಲಯಕ್ಕೆ ತೆರಳಿ ವಾಪಸಾಗಿದ್ದರು. ಕೆ. ವಿ. ನಾರಾಯಣ ಅವರಂತೆ ಕಿ.ರಂ. ಅವರೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಳಿದಿದ್ದರೆ ಅವರು ಗುರುವಾಗುವ, ಅವರಿಂದ ನೇರವಾಗಿ ಕಲಿಯುವ ಅವಕಾಶ ತಪ್ಪಿ ಹೋಗುತ್ತಿತ್ತು. ಅವರು ಕನ್ನಡ ಅಧ್ಯಯನ ಕೇಂದ್ರಕ್ಕೆ ಮರಳಿ ಬಂದದ್ದರಿಂದ ಗುರುಗಳಾಗಿ ದೊರೆತರು. ಅವರು ಮರಳಿ ಬರದಿದ್ದರೆ ಅವರ ಸಾಮೀಪ್ಯವೇ ದೊರೆಯುತ್ತಿರಲಿಲ್ಲ. ಅವರನ್ನು ಗುರುವಾಗಿ ಸ್ವೀಕರಿಸುವ ಸಂದರ್ಭವೇ ಬರುತ್ತಿರಲಿಲ್ಲ. ಇಲ್ಲವೇ ಸಾಹಿತ್ಯಾಸಕ್ತಿಯ ಕಾರಣ ಅವರ ಪರಿಚಯವಾಗುತ್ತಿತ್ತೇ ಹೊರತು ಅವರೊಡನೆ ಆಪ್ತವಾಗಿ ಕಲಿಯುವ ಅವಕಾಶ ದೊರೆಯುತ್ತಿರಲಿಲ್ಲ. ಅವರು ಕನ್ನಡ ವಿಶ್ವವಿದ್ಯಾಲಯದಿಂದ ಮರಳಿ ಕನ್ನಡ ಅಧ್ಯಯನ ಕೇಂದ್ರಕ್ಕೆ ಬಂದದ್ದೇ ಇಲ್ಲಿ ಪ್ರಮುಖ ಸಂಗತಿ.
ಕನ್ನಡ ಅಧ್ಯಯನ ಕೇಂದ್ರದಲ್ಲಿ 1996ರ ಹೊತ್ತಿಗೆ ಇದ್ದ ವಿದ್ವಾಂಸರ, ಅಧ್ಯಾಪಕರ ಬಳಗದಲ್ಲಿ ಅತ್ಯಂತ ಹೆಚ್ಚು ಆಪ್ತವಾಗಿದ್ದು ಕಿ. ರಂ. ಅವರು ಮಾತ್ರವೇ. ಡಿ. ಆರ್. ಅವರ ವಿದ್ವತ್ತು ನಮ್ಮನ್ನು ಸೆಳೆದಿತ್ತು. ಆ ಬಗೆಗೆ ನಮಗೆ ಗೌರವವಿತ್ತು. ಆ ಗೌರವದೊಂದಿಗೆ ಅವರನ್ನು ಸಮೀಪಿಸುವ ಬಯಕೆಯಿತ್ತು. ಆದರೆ ಆ ಮೊದಲೇ ಅವರು ನಮ್ಮನ್ನೆಲ್ಲಾ ಬಿಟ್ಟುಹೋದರು. ಹಾಗಾಗಿ ಡಿ.ಆರ್. ಅವರ ವ್ಯಕ್ತಿತ್ವದ ಮತ್ತು ವಿದ್ವತ್ತಿನ ಪರಿಚಯ ಅವರ ಬರೆಹಗಳಿಂದಾಯಿತೇ ಹೊರತು ಅವರ ಜೊತೆಗಿನ ಆಪ್ತ ಸಂವಾದದ ಮೂಲಕ ಆಗಲಿಲ್ಲ. ಅವರ ತರಗತಿಗಳನ್ನು ಕೇಳುವ ಅವಕಾಶ ದೊರೆತಿತ್ತು. ಅವರ ವಿದ್ವತ್ಪೂರ್ಣ ಬೋಧನಾ ಕ್ರಮ ಬೆರಗು ಹುಟ್ಟಿಸಿತ್ತು. ಆದರೆ ನಾವು ಆಗಶ್ಟೇ ಸಾಹಿತ್ಯಕ್ಕೆ ಪ್ರವೇಶ ಪಡೆಯುತ್ತಿದ್ದ ಕಾರಣ ಅವರೆಲ್ಲ ವಿಚಾರಗಳನ್ನು ಜೀರ್ಣಿಸಿಕೊಳ್ಳುವುದು ಕಶ್ಟವಾಗುತ್ತಿತ್ತು. ಆದರೂ ಅವರ ವಿಚಾರಗಳನ್ನು ಜೀರ್ಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ಅವರ ಬೋಧನೆಯ ಎತ್ತರಕ್ಕೆ ಕೇಳುಗರಾಗಿ ನಾವು ಏರುವ ಅಗತ್ಯವಿತ್ತು. ಅದಕ್ಕೆ ತರಗತಿಗಳು ಮಾತ್ರ ಸಾಕಾಗುತ್ತಿರಲಿಲ್ಲ. ತರಗತಿಯಾಚೆಗೆ ಅವರ ಸಾಹಿತ್ಯದ ಉಪನ್ಯಾಸಗಳನ್ನು ಕೇಳಬೇಕಿತ್ತು. ಆದರೆ ಅಂತಹ ಅವಕಾಶ ದೊರೆಯಲಿಲ್ಲ. ಅವರ ಒಡನಾಟ ಹೆಚ್ಚು ದಕ್ಕಲಿಲ್ಲ. ಹಾಗಾಗಿ ತರಗತಿಯಾಚೆಗೆ ಅವರೊಂದಿಗೆ ಹೆಚ್ಚು ಬೆರೆಯಲು ಮತ್ತು ಕಲಿಯಲು ಸಾಧ್ಯವಾಗಲಿಲ್ಲವೆಂಬ ಕೊರಗು ಇಂದಿಗೂ ಇದೆ. ಅವರ ಅಗತ್ಯ ಕನ್ನಡಕ್ಕೂ, ವೈಯಕ್ತಿಕ ಕಲಿಕೆಗೂ ಹೆಚ್ಚಿತ್ತು. ಕಿರಂ ಅವರ ಒಡನಾಟ ಸಾಧ್ಯವಾದಂತೆ ಡಿ.ಆರ್. ಅವರ ಜೊತೆಗೆ ಸಾಧ್ಯವಾಗಿದ್ದರೆ ಬೌದ್ಧಿಕ ಬೆಳವಣಿಗೆಗೆ ಇನ್ನಶ್ಟು ಅನುಕೂಲವಾಗುತ್ತಿತ್ತು ಎನ್ನಿಸಿದೆ. ಅವರನ್ನು ಬಹಳ ಬೇಗ ಕಳೆದುಕೊಂಡೆವು ಎನ್ನಿಸಿದೆ.
ಇನ್ನುಳಿದಂತೆ ಎನ್.ಎಸ್.ಎಲ್., ಹಂಪನಾ ಅವರು ನಾವು ಅಧ್ಯಯನ ಕೇಂದ್ರ ಸೇರಿದ ಮೊದಲ ಆರು ತಿಂಗಳಲ್ಲಿಯೇ ನಿವೃತ್ತರಾದರು. ಉಳಿದಂತೆ ತರಗತಿಗಳಾಚೆಗೆ ಬೇರೆ ಯಾವ ಅಧ್ಯಾಪಕರೂ ಹೆಚ್ಚು ಆತ್ಮೀಯರಾಗಲಿಲ್ಲ. ಇದಕ್ಕೆ ಕಾರಣಗಳು ಹಲವು. ಕೆಲವರು ತರಗತಿಗಳಿಗೆ ಸರಿಯಾಗಿ ಬರುತ್ತಿರಲಿಲ್ಲ. ಇನ್ನು ಕೆಲವರ ಬೋಧನೆ ಇಶ್ಟವಾಗುತ್ತಿರಲಿಲ್ಲ. ಕೆಲವರು ತರಗತಿಗಳನ್ನೇ ತೆಗೆದುಕೊಳ್ಳದೆ ಸದಾ ಅಧ್ಯಯನ ಕೇಂದ್ರದ ಹೊರಗೇ ಇರುತ್ತಿದ್ದರು. ಇನ್ನು ಕೆಲವರ ವಿಚಾರಗಳು ಸಾಂಪ್ರದಾಯಿಕವಾಗಿರುತ್ತಿದ್ದವು. ಅಂತಹವರ ಜೊತೆಗೆ ಸಹಜವಾಗಿಯೇ ಒಂದು ಅಂತರ ಸೃಶ್ಟಿಯಾಗಿಬಿಟ್ಟಿತ್ತು. ಕೆ. ಪಿ. ಭಟ್ ಅವರು ಶಿಸ್ತುಬದ್ಧವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಅವರ ಬೋಧನಾ ಕ್ರಮ ಆಸಕ್ತಿ ಹುಟ್ಟಿಸಲಿಲ್ಲ. ಅವರು ಬೋಧಿಸುತ್ತಿದ್ದ ಭಾಶಾವಿಜ್ಞಾನದ ವಿಚಾರಗಳು ಪ್ರಭಾವಿಸಲಿಲ್ಲ. ಭಾಶೆ ಕುರಿತು ಅವರು ಬರೆದಿರುವ ಕೃತಿಗಳಲ್ಲಿ ಮೌಲ್ಯಯುತವಾದ ವಿಚಾರಗಳಿದ್ದರೂ ಅವರ ಬೋಧನೆಯಲ್ಲಿ ಅವು ಪರಿಣಾಮಕಾರಿಯಾಗಿ ನನ್ನನ್ನು ಆಕರ್ಶಿಸಲಿಲ್ಲ. ಅವರ ಬೋಧನೆಯ ಏಕತಾನತೆ ಬೇಸರ ತರಿಸುತ್ತಿತ್ತು. ಅಲ್ಲದೆ ಭಾಶೆ ಕುರಿತಾದ ವಿಚಾರಗಳನ್ನು ಬದುಕಿಗೆ ನೇರವಾಗಿ ಅನ್ವಯಿಸಿ ಬೋಧಿಸದ ಕಾರಣ ಅವರ ವಿಚಾರಗಳು ಮೌಲ್ಯಯುತವಾಗಿದ್ದರೂ ಅವು ದೂರವೇ ಉಳಿದವು.
ಆದರೆ ನಮಗೆ ಬೇಕಾದ ಗುರುವನ್ನು ಹುಡುಕಿಕೊಳ್ಳುವ ಅನಿವಾರ್ಯವಿತ್ತು. ಅದಕ್ಕೆ ಕಿರಂ ಅವರ ವಿದ್ಯಾರ್ಥಿ ಸ್ನೇಹಿಯಾದ ಗುಣ ಸಹಾಯ ಮಾಡಿತು. ಆಸಕ್ತರಾದ ನಾವು ಅವರನ್ನು ಅರಸಿಹೋದಂತೆ ಅವರು ಕೂಡ ಆಸಕ್ತ ಸಾಹಿತ್ಯದ ವಿದ್ಯಾರ್ಥಿಗಳನ್ನು ಅರಸಿ ಹತ್ತಿರವಾಗುತ್ತಿದ್ದರು. ಅವರೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದರು. ಅಧ್ಯಯನ ಕೇಂದ್ರದಲ್ಲಿ ಕಿರಂ ನಿರಂತರವಾಗಿ ತರಗತಿ ತೆಗೆದುಕೊಳ್ಳುತ್ತಿದ್ದರು. ಇತರರು ತರಗತಿ ತೆಗೆದುಕೊಳ್ಳದಿದ್ದಾಗಲೂ ಅವರು ಕ್ಲಾಸ್ ಮಾಡುತ್ತಿದ್ದರು. ಅವರ ಚಿಂತನಾ ಕ್ರಮ ನಮ್ಮನ್ನು ಆಕರ್ಶಿಸುತ್ತಿತ್ತು. ಅಲ್ಲದೆ ಅವರಿಗೆ ಪಾಠ ಮಾಡಲು ತರಗತಿಯೇ ಆಗಬೇಕೆಂದೇನೂ ಇರಲಿಲ್ಲ. ಅವರ ಕೋಣೆ, ಅಧ್ಯಯನ ಕೇಂದ್ರದ ಕಾರಿಡಾರು, ಕ್ಯಾಂಟಿನ್, ನಡೆದಾಡುವ ರಸ್ತೆಗಳು, ಅವರ ಮನೆ ಒಳಗೊಂಡಂತೆ ಎಲ್ಲಿಯಾದರೂ ಸರಿ. ಒಬ್ಬರಿರಲಿ ಇಬ್ಬರಿರಲಿ ಅದು ಅವರಿಗೆ ಮುಖ್ಯವಾಗಿರಲಿಲ್ಲ. ಕೇಳಿಸಿಕೊಳ್ಳುವವರು ಇದ್ದರೆ ಸಾಕು ಹೊತ್ತುಗೊತ್ತುಗಳಿಲ್ಲದೆ ಮಾತನಾಡುತ್ತಿದ್ದರು. ಅವರ ಮಾತನ್ನು ಶ್ರದ್ಧೆ-ಆಸಕ್ತಿಗಳಿಂದ ಕೇಳಿಸಿಕೊಳ್ಳುವವರು ಎದುರಿಗಿದ್ದರೆ ಯಾವುದಾದರೂ ಒಂದು ಸಂಗತಿಯನ್ನು ಪ್ರಸ್ತಾಪಿಸಿ ಚಿಂತನೆಗೆ ಹಚ್ಚುತ್ತಿದ್ದರು.
ಹಾಗಾಗಿಯೇ ಅವರ ಜೊತೆಗೆ ಒಬ್ಬನೇ ಇದ್ದಾಗಲೂ ಅನೇಕ ವಿಚಾರಗಳನ್ನು ಚರ್ಚಿಸಿದ್ದಾರೆ. ಅವರ ತರಗತಿಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚು ವಿಚಾರಗಳನ್ನು ಅವರೊಂದಿಗಿನ ಮಾತುಕತೆಗಳ ಮೂಲಕ ಅರಿತದ್ದೇ ಹೆಚ್ಚು. ಅವರಾಡಿರುವ ಮಾತುಗಳು; ಕೇಳಿಸಿಕೊಂಡಿರುವ ವಿಚಾರಗಳೇ ಒಂದೇ ಎರಡೇ? ಅವರು ಚರ್ಚಿಸಿದ ಅಸಂಖ್ಯ ವಿಚಾರಗಳು ನನ್ನೊಳ ಹೊಕ್ಕಿವೆ. ಅವುಗಳೆಲ್ಲವನ್ನೂ ಒಂದೊಂದಾಗಿ ನೆನಪಿಸಿಕೊಂಡು ದಾಖಲಿಸುವುದು ಸಾಧ್ಯವೇ ಇಲ್ಲ. ಉಪ್ಪು ನೀರು ಬೆರೆತಂತೆ ಅವರ ವಿಚಾರಗಳು ಬೆರೆತುಹೋಗಿವೆ. ನನ್ನಂತೆಯೇ ಅನೇಕರೊಳಗೆ ಬೆರೆತಿವೆ. ನಿತ್ಯದ ಸಾಹಿತ್ಯದ ಓದು ಬರೆಹಗಳಲ್ಲಿ ಅವರ ಪ್ರತಿಬಿಂಬ ಕಂಡರೆ ಅದು ಸಹಜವಾದುದೇ ಆಗಿದೆ. ಇದಕ್ಕೆ ನಿಜವಾದ ಕಾರಣ ಅಧ್ಯಾಪಕರಾಗಿ ಕಿರಂ ನಮ್ಮನ್ನು ಆಕರ್ಶಿಸಿದ್ದರು. ಇದರಿಂದಾಗಿ ಅವರ ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದೆವು. ಕೆಲವೊಮ್ಮೆ ಪ್ರಶ್ನೆಗಳನ್ನು ಕೇಳುತ್ತಿದ್ದೆವು.
ಪ್ರಥಮ ಎಂ.ಎ. ತರಗತಿಯಲ್ಲಿ ಅಲ್ಲಮನ ವಚನಗಳನ್ನು ಕುರಿತು ಪಾಠ ಮಾಡುತ್ತಿದ್ದರು. ಅಂದಿನ ಅವರ ತರಗತಿಗೆ ಮೊದಲು ಲೈಬ್ರರಿಯಲ್ಲಿ ಅಸ್ತಿತ್ವವಾದದ ಕುರಿತು ಮೀರಾ ಚಕ್ರವರ್ತಿಯವರು ಅನುವಾದಿಸಿದ್ದ ಕೃತಿಯೊಂದನ್ನು ಓದಿಕೊಂಡು ಹೋಗಿದ್ದೆ. ಓದಿದ್ದ ವಿಚಾರಗಳು ಇನ್ನೂ ಹಸಿಹಸಿಯಾಗಿಯೇ ಇದ್ದು ಆ ವಿಚಾರಗಳನ್ನು ಅನ್ವಯಿಸಿ ಅಲ್ಲವನು ಅಸ್ವಿತ್ವವಾದಿಯಲ್ಲವೇ? ಎಂದೆ. ಅದಕ್ಕೆ ಕಿರಂ ಅವರು ‘ಹೌದು, ಅವನು ಅಸ್ತಿತ್ವವಾದಿ. ಆದರೆ ಅವನು ದೇವಸಹಿತ ಅಸ್ತಿತ್ವವಾದಿ. ದೇವರನ್ನು ಒಪ್ಪಿದ ಅಸ್ವಿತ್ವವಾದಿ’ ಎಂದರು. ಅಂದು ಅವರು ತರಗತಿಯಲ್ಲಿ ಕೊಟ್ಟ ಆ ಒಳನೋಟ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅಲ್ಲಮನನ್ನು ಮತ್ತೆ ಮತ್ತೆ ಓದುವಾಗಲೆಲ್ಲ ಕಿರಂ ಅವರ ಈ ಒಳನೋಟ ಕಣ್ಣೆದುರು ಹಾಜರಾಗುತ್ತದೆ. ಯಾಕೆಂದರೆ ಅಲ್ಲಮ ದೇವರನ್ನೇ ಪ್ರಶ್ನಿಸಿದವನು. ‘ನಾ ದೇವನಲ್ಲದೇ ನೀ ದೇವನೇ’ ಎಂದವನು. ಹೀಗೆಂದ ಅಲ್ಲಮನು ದೈವವನ್ನು ನಿರಾಕರಿಸಿದವನಲ್ಲ. ದೇವರನ್ನು ಒಪ್ಪಿ, ಆ ದೈವದೊಂದಿಗೆ ತೀವ್ರವಾಗಿ ಗುದ್ದಾಟ ಮತ್ತು ಮಂಥನ ನಡೆಸಿದವನು ಅಲ್ಲಮ. ಉಳಿದ ಶರಣರಂತೆ ಏಕಮುಖವಾಗಿ ತಮ್ಮ ಆರಾಧ್ಯ ದೇವರಿಗೆ ಅಲ್ಲಮ ಶರಣಾಗಲಿಲ್ಲ. ಅವನ ವಚನಗಳನ್ನು ಓದಿದವರಿಗೆ ಇದು ತಿಳಿದ ಸಂಗತಿಯೇ ಆಗಿದೆ. ಹಾಗಾಗಿ ಕಿರಂ ಅಂದು ಹೇಳಿದ ಮಾತು ಇಂದಿಗೂ ನಿಜವಾಗಿದೆ. ಅಲ್ಲಮನನ್ನು ಅರಿಯಲು ನೆರವಾಗುತ್ತದೆ.
ಇಂತಹ ಒಳನೋಟಗಳು ಇಂದಿನ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ದೊರೆಯುವುದು ಅಪರೂಪವಾಗಿದೆ. ಇಂದಿನ ಸ್ನಾತಕೋತ್ತರ ತರಗತಿಗಳು ಸಾಹಿತ್ಯ ಕೃತಿಗಳ ಸಾರಾಂಶ ಹೇಳುವ ಮಟ್ಟಕ್ಕೆ ಬಂದು ಮುಟ್ಟಿವೆ. ಸಾಹಿತ್ಯವನ್ನು ಓದಿಕೊಳ್ಳುವ ವ್ಯಾಖ್ಯಾನಿಸುವ ಹೊಸ ಹೊಸ ವಿಧಾನಗಳನ್ನು ಪರಿಚಯಿಸುವುದೇ ಇಲ್ಲ. ಆದರೆ ಕಿರಂ ಅವರು ಎಂದಿಗೂ ಸಾಹಿತ್ಯ ಕೃತಿಯ ಸಾರಾಂಶವನ್ನು ಹೇಳಿದವರಲ್ಲ. ಅವರು ಯಾವುದೇ ಕೃತಿಯನ್ನು ಮತ್ತೆ ಮತ್ತೆ ಓದುವಾಗಲೂ ಹೊಸದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. ಇದು ಕನ್ನಡ ಸಾಹಿತ್ಯದ ಸೃಜನಶೀಲ ಓದಿಗೆ ಸಹಾಯವಾಗಿದೆ. ತಮ್ಮ ತರಗತಿಗಳು, ಚರ್ಚೆಗಳು ಮತ್ತು ಮಾತುಕತೆಗಳಿಂದ ನೂರಾರು ಜನರನ್ನು ಪ್ರಭಾವಿಸಿದ್ದಾರೆ. ಅವರಿಗೆ ಮಾತೇ ಪ್ರಮುಖ ಸಂವಹನ ಮಾಧ್ಯಮವಾಗಿದ್ದುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಹಾಗಾಗಿಯೇ ಅವರು ಯಾವುದೇ ವಿಶಯದ ಬಗೆಗೆ ಇಲ್ಲವೇ ಕೃತಿಗಳ ಬಗೆಗೆ ಮಾತನಾಡಿದರೂ ಅದು ‘ನಿಚ್ಚಂ ಪೊಸತಾಗಿ’ಯೇ ಇರುತ್ತಿತ್ತು. ಅವರ ಸಾಹಿತ್ಯ ಬೋಧನೆಯ, ವ್ಯಾಖ್ಯಾನದ, ವಿಮರ್ಶೆಯ ಈ ಗುಣವೇ ನನ್ನನ್ನು ಹೆಚ್ಚು ಆಕರ್ಶಿಸುತ್ತಿತ್ತು. ಅವರು ಕೊನೆಯ ದಿನ ಬೇಂದ್ರೆಯವರ ‘ಜೋಗಿ’ ಕವಿತೆಯನ್ನು ಕುರಿತು ಮಾಡಿದ ಉಪನ್ಯಾಸವೂ ಇದೇ ಅನುಭವ ನೀಡಿತು. ಅವರ ಜೊತೆಗೆ ಒಡನಾಡಿದ ಹದಿನೈದು ವರ್ಶಗಳು ಇಂತಹ ಅನುಭವವನ್ನೇ ನೀಡಿದೆ. ಹಾಗಾಗಿ ಅವರ ಮಾತುಗಳಿಗೆ ಮನಸ್ಸು ಸದಾ ಹಾತೊರೆಯುತ್ತಿತ್ತು. ಅವರ ಮಾತು ಎಂದಿಗೂ ಹಳಸಲು ಎನ್ನಿಸಲೇ ಇಲ್ಲ. ಹಾಗಾಗಿಯೇ ಸಾಹಿತ್ಯದ ಗಂಭೀರವಾದ ವಿದ್ಯಾರ್ಥಿಗಳು ಅವರ ಮಾತುಗಳಿಗಾಗಿ, ಸಾಮೀಪ್ಯಕ್ಕಾಗಿ ಸದಾ ಹಾತೊರೆಯುತ್ತಿದ್ದರು. ಅವರ ಮನೆಯಲ್ಲಿ ಸದಾ ಯಾರಾದರೂ ಇದ್ದೇ ಇರುತ್ತಿದ್ದರು. ಅಲ್ಲಿ ಸಾಹಿತ್ಯದ ಉಪಾಸನೆ, ಪರಿಚಾರಿಕೆ ನಡೆಯುತ್ತಲೇ ಇತ್ತು.
ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ನಂತರ ಸಾಹಿತ್ಯದ ಮತ್ತು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡೆವು. ಸಾಹಿತ್ಯದ ಓದನ್ನು ವಿಸ್ತರಿಸಿಕೊಳ್ಳಲು ವಿಶ್ವವಿದ್ಯಾಲಯದ ಗ್ರಂಥಾಲಯವನ್ನೂ ಅವಲಂಬಿಸಿದೆವು. ಈ ಹಂತದಲ್ಲಿ ನಮಗೆ ಹೊಸತನ್ನು ಕಲಿಸುವ ಗುರುಗಳ ಹುಡುಕಾಟದಲ್ಲಿದ್ದಾಗ ಕಿರಂ ಸಿಕ್ಕರು. ಅವರು ನನ್ನಂತೆಯೇ ಹಲವರ ಮೆಚ್ಚಿನ ‘ಮೇಶ್ಟ್ರು’ ಆದರು. ಆರಂಭದಲ್ಲಿ ಅವರ ಬೋಧನೆ ಮತ್ತು ವಿಚಾರಗಳನ್ನು ಹಿಂಬಾಲಿಸುವುದು ಕಶ್ಟವಾಗುತ್ತಿತ್ತು. ಆದರೆ ಅವರನ್ನು ಗಂಭೀರವಾಗಿ ಭಾವಿಸಿ ಕೇಳಿಸಿಕೊಳ್ಳತೊಡಗಿದ ನಂತರ, ನಮ್ಮ ಸಾಹಿತ್ಯದ ಅರಿವು ನಿಧಾನವಾಗಿ ವಿಸ್ತರಿಸಲು ಶುರುವಾಯಿತು. ಅವರ ವಿಚಾರಗಳು ಅರ್ಥವಾಗತೊಡಗಿದವು. ಅವರ ಮಾತಿನ ಲಯಕ್ಕೆ ನಿಧಾನವಾಗಿ ಒಗ್ಗಿಕೊಳ್ಳತೊಡಗಿದೆವು. ಅವರು ನನ್ನ ಬುದ್ಧಿ-ಭಾವ ನೆಲೆಯೂರತೊಡಗಿದರು. ಹೀಗೆ ಒಳಗಿಳಿಯ ತೊಡಗಿದ ಮೇಶ್ಟ್ರು ಒಂದೂವರೆ ದಶಕಗಳ ಕಾಲ ಬೌದ್ಧಿಕ ಗುರುವಾಗಿದ್ದರು. ಇದೇ ಒಂದು ಪದವಿ. ಇದೇ ಒಂದು ಪ್ರಶಸ್ತಿ ಎಂದು ಹಲವು ಹೇಳಿದ ಮಾತು ಉತ್ಪ್ರೇಕ್ಶೆ ಎಂದು ಯಾವತ್ತೂ ಅನ್ನಿಸಿಲ್ಲ.
-ರಂಗನಾಥ ಕಂಟನಕುಂಟೆ




