ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೊಂಡಿರುವ ರಮೇಶ್ ಜಾರಕಿಹೊಳಿ ಅವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಭಿವೃದ್ಧಿಯ ರಾಜಕಾರಣವನ್ನು ಮಾಡಬೇಕೆ ಹೊರತು ಸಿ.ಡಿ ರಾಜಕಾರಣವಲ್ಲ ಎಂದು ಕಿವಿಮಾತು ಹೇಳಿದರು.
ಮಹಿಳೆಯರಿಗೆ ಗೌರವ ನೀಡುವುದು ಭಾರತೀಯರ ಸಂಸ್ಕೃತಿ. ಆದರೆ ವಿಷಕನ್ಯೆ ಎಂಬ ಪದ ಬಳಸುವುದು ಸರಿಯಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರೇ ಸಿ.ಡಿ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ಗೊಂದಲದ ಹೇಳಿಕೆಗಳನ್ನು ನೀಡಬಾರದು ಎಂದರು.
ಸಹಕಾರ ಇಲಾಖೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ. ಇಲ್ಲಯವರೆಗೆ ಏಕೆ ಈ ಬಗ್ಗೆ ಮೌನ ವಹಿಸಿದ್ದರು ಎಂದು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರು ಶಾಸಕರಾಗದಿದ್ದಾಗ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಹೇಳುವುದು ಸರಿಯಲ್ಲ. ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆಯಲ್ಲಿ ಶಿವಕುಮಾರ್ ಅವರ ವೇಗವನ್ನು ಕಂಡು ಬಿಜೆಪಿಗೆ ನಡುಕಹುಟ್ಟಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರದ ಕೆಲಸಗಳ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳು, ಶಾಲಾ ಸಮವಸ್ತ್ರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದರೂ ದಪ್ಪ ಚರ್ಮದ ಬಿಜೆಪಿ ಸರ್ಕಾರ ಕಾರ್ಯನಿರ್ವಹಿಸುವಲ್ಲಿ ಕಾಳಜಿ ತೋರುತ್ತಿಲ್ಲ ಎಂದರು.



