ದೆಹಲಿ: ರಾಜ್ಯದ ಜಾನುವಾರುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಯೋಜನೆಗಳಲ್ಲಿ ರೂ.60 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನೆ ಸಚಿವರಾದ ಪುರುಷೋತ್ತಮ್ ರೂಪಾಲ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಇಲಾಖೆಯ ರಾಷ್ಟ್ರೀಯ ಜಾನುವಾರು ಯೋಜನೆಯಡಿ ಜಾನುವಾರುಗಳ ಅಭಿವೃದ್ಧಿ ಕಾರ್ಯಕ್ರಮಗಳಾದ ಜಾನುವಾರುಗಳ ಆರೋಗ್ಯ ಕಾರ್ಯಕ್ರಮಗಳು ಹಾಗೂ ವಿವಿಧ ಸಹಾಯಧನ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ರೂ.56 ಕೋಟಿ ಅನುದಾನ ನೀಡಿದೆ ಎಂದಿದ್ದಾರೆ.
2022-23ನೇ ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರುಗಳ ವಿಮಾ ಸೌಲಭ್ಯಕ್ಕೆ ರೂ.11.60ಕೋಟಿ, ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮಗಳಿಗಾಗಿ ರೂ.13.04 ಕೋಟಿ ಮತ್ತು ಪಶುಪಾಲಕರಿಗೆ ನೆರವು ನೀಡಲು ರೂ.30 ಕೋಟಿ ಅನುದಾನ ನೀಡಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಇಡಿಪಿ ಎಸ್.ಎಲ್.ಇ.ಸಿ ಯೋಜನೆಯಡಿ ಶೇ.50ರಷ್ಟು ಸಹಾಯಧನ ಯೋಜನೆಯಡಿಯಲ್ಲಿ 12 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ರೂ.4.88ಕೋಟಿ ಸಹಾಯಧನ ಮಂಜೂರು ಮಾಡಿದೆ ಎಂದಿದ್ದಾರೆ.
ರಾಜ್ಯದಲ್ಲಿ ಜಾನುವಾರುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಹೊತ್ತು ಕೊಟ್ಟಿರುವುದರ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ರಾಜ್ಯ ಸರ್ಕಾರ ಗೋಸಂರಕ್ಷಣೆಯಲ್ಲಿ ಸಕ್ರೀಯವಾಗಿರುವುದು ಗೋಸಂಕುಲ ಸಂತತಿ ವೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಪಶುಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.



