ಕರಾವಳಿ ಕಂಡ ಮಾದರಿ ರಾಜಕಾರಣಿಗಳಲ್ಲಿ ಒಬ್ಬರಾದ ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ಇಂದು 75 ನೇ ಜನ್ಮದಿನ. ಅವರಿಗೆ “ವಜ್ರವಸಂತ”ದ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಮುಂದಿನ ಬದುಕು ಆರೋಗ್ಯ, ನೆಮ್ಮದಿಗಳಿಂದ ಕೂಡಿರಲಿ ಎಂದು ಆಶಿಸಿ ಈ ಪೋಸ್ಟ್.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸುಮಾರು 37 ವರ್ಷಗಳ ಕಾಲ ಕರಾವಳಿಯ ರಾಜಕೀಯಕ್ಕೊಂದು ಸ್ವಚ್ಛ ಮೇಲ್ಪಂಕ್ತಿಯನ್ನು ಹಾಕಿಕೊಟ್ಟದ್ದು ಮಾತ್ರವಲ್ಲದೇ, ತನ್ನ ರಾಜಕೀಯದ ಉತ್ತುಂಗದಲ್ಲೇ ತನ್ನ ಮುಂದಿನ ತಲೆಮಾರಿಗೆ ಹಾದಿ ತೆರೆದುಕೊಟ್ಟು, ರಾಜಕೀಯದಿಂದ ವಿಶ್ರಾಂತಿ ಪಡೆದವರು ಅವರು. ಹಾಗೆಂದು, ಇಂದಿಗೂ ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ತಮ್ಮ ರೈತಸಂಘದ ಮೂಲಕ ಮುಂಚೂಣಿಯಲ್ಲಿ ನಿಂತು ನೇತೃತ್ವ ನೀಡುತ್ತಿರುವ, ಅಧಿಕಾರ-ಸಕ್ರಿಯ ರಾಜಕೀಯ ಇಲ್ಲದೇ ಇದ್ದರೂ ಜನನಾಯಕರಾಗಿ ಉಳಿಯಬಲ್ಲ ಅಪರೂಪದ ವ್ಯಕ್ತಿತ್ವ ಅವರದು.
ನಾಲ್ಕು ಅವಧಿಗಳಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಮತ್ತೆ ಮೂರು ಅವಧಿಗಳಿಗೆ ಕರ್ನಾಟಕ ವಿಧಾನಪರಿಷತ್ತಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ, ವಿಧಾನಮಂಡಲದ ಅರ್ಜಿ ಸಮಿತಿಗೆ ಹೊಸ ಜೀವ ಕೊಟ್ಟವರಾಗಿ, ಕೊನೆಗೆ ವಿಧಾನಪರಿಷತ್ತಿನ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟರ ಸೇವೆ ಅನನ್ಯ. ಹಳೆಯ ತಲೆಮಾರಿನ ಸೇವೆ ಆಧರಿತ ರಾಜಕೀಯದ ಕೊನೆಯ ಕೊಂಡಿ ಅವರು.
ಇಂತಹದೊಂದು ವ್ಯಕ್ತಿತ್ವವನ್ನು, ಅವರು ಸಾರ್ವಜನಿಕ ಬದುಕಿನಿಂದ ಹೊರತೆರಳುವ ಹೊತ್ತಿನಲ್ಲಿ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು. ಕಳೆದ ವರ್ಷ ಪ್ರತಾಪರ 75ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕೋರಿಕೊಂಡಿದ್ದೆ. ಅವರ ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಎಲ್ಲ ಸೇರಿ, ಸಂಭ್ರಮದಿಂದ ಈ ಕಾರ್ಯಕ್ರಮವನ್ನು ಆಚರಿಸಲು ವರ್ಷದ ಹಿಂದೆಯೇ ಸಿದ್ಧತೆ ಆರಂಭಿಸಿದ್ದೆವು.
ಎಲ್ಲವೂ ನಾವು ಊಹಿಸಿದಂತೆ ನಡೆದಿದ್ದರೆ, ಇಂದು ಪ್ರತಾಪಚಂದ್ರ ಶೆಟ್ಟರ 75ನೇ ಜನ್ಮದಿನದ ನೆಪದಲ್ಲಿ ಕುಂದಾಪುರದ ಕಳೆದ 50 ವರ್ಷಗಳ ಅಭಿವೃದ್ಧಿ-ರಾಜಕಾರಣ, ಪ್ರತಾಪರ ಬದುಕು-ಹಾದಿ ಇತ್ಯಾದಿ ಸಂಗತಿಗಳ ಕುರಿತು ಚಿಂತನ-ಮಂಥನ, ಅವರ ರಾಜಕೀಯ ಒಡನಾಡಿಗಳ, ಸಂಸದೀಯ ಒಡನಾಡಿಗಳ ಅನುಭವಗಳು ಎಲ್ಲವನ್ನೂ ಒಳಗೊಂಡು, ನಾಡಿನ ಸಮಕಾಲೀನ ರಾಜಕಾರಣದ ಕುರಿತು ಪೂರ್ಣಪ್ರಮಾಣದ ಚಿಂತನ-ಮಂಥನ-ಸಂಭ್ರಮ ನಡೆಯಬೇಕಿತ್ತು; ಹಾರ-ತುರಾಯಿಗಳ ಬದಲು, ಪ್ರತಾಪರ ವ್ಯಕ್ತಿತ್ವಕ್ಕೆ ತಕ್ಕಂತಹದೊಂದು ವೈಚಾರಿಕ ಸಂಭ್ರಮವನ್ನು ವರ್ಷಪೂರ್ತಿ ನಡೆಸುವ ಉದ್ದೇಶವೂ ಇತ್ತು. ಕೊನೆಗೆ ಅವೆಲ್ಲವೂ ದಾಖಲೆಗಳಾಗಿ ಮುಂದಿನ ತಲೆಮಾರಿಗೆ ಒದಗಬೇಕೆಂಬ ಆಸೆ ಇತ್ತು.
ಆದರೆ, ಸ್ವತಃ ಪ್ರತಾಪಚಂದ್ರ ಶೆಟ್ಟಿ ಅವರ ಪ್ರೀತಿಪೂರ್ವಕ ಒತ್ತಾಸೆಯ “ವೀಟೊ” ಬಂಧನಕ್ಕೆ ಕಟ್ಟುಬಿದ್ದು, ಈ ಎಲ್ಲ ತಯಾರಿಗಳನ್ನು ನಾವು ನಿಲ್ಲಿಸಬೇಕಾಯಿತು. ಸಂಭ್ರಮ-ಸನ್ಮಾನಗಳೆಂದರೆ ಎಲ್ಲರಿಗಿಂತ ಮುಂದೆ ನಿಂತು ಕೇಳಿ ಪಡೆಯುವ, ಶತಾಯ-ಗತಾಯ ದಕ್ಕಿಸಿಕೊಳ್ಳುವ ರಾಜಕಾರಣಿಗಳ ಎದುರು ಪ್ರತಾಪಚಂದ್ರ ಶೆಟ್ಟರದು ಭಿನ್ನ ಹಾದಿ, ತನಗಿಂತ ಹಲವು ಹಿರಿಯರು ಸಾಕಷ್ಟು ಸಾಧನೆಗಳನ್ನು ಮಾಡಿರುವವರು ಇರುವಾಗ, ತನ್ನ ಜನ್ಮದಿನಕ್ಕೆ ಈ ರೀತಿಯ ಸಂಭ್ರಮ ತನಗೆ ಮುಜುಗರ ತಂದೀತು ಎಂಬ ಆತಂಕ ಅವರದು. ಅವರ ಭಾವನೆಗಳನ್ನು ಗೌರವಿಸದೇ ನಮಗೆ ಬೇರೆ ಹಾದಿ ಇರಲಿಲ್ಲ. ಈ ನಿರಾಕರಣೆಯ ಮೂಲಕ ಪ್ರತಾಪಚಂದ್ರ ಶೆಟ್ಟಿ ಅವರು ಹೊಸದೊಂದು ಎತ್ತರವನ್ನು ತಲುಪಿದ್ದಾರೆ. ಅವರ 75ಕ್ಕೆ ಇಂತಹದೊಂದು ಸಂಭ್ರಮದ ನಿರೀಕ್ಷೆಯನ್ನು ಅವರ ಹಿತೈಷಿಗಳ-ಅಭಿಮಾನಿಗಳ ಮನದಲ್ಲಿ ಎಬ್ಬಿಸಿದ ಹೊಣೆ ನನ್ನದು. ಹಾಗಾಗಿ ಈ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಸಾಮಾಜಿಕವಾಗಿ ಅವರ ಸೇವೆ, ಜನಚಳುವಳಿಗಳ ನಾಯಕತ್ವ ಕರಾವಳಿ ಕರ್ನಾಟಕಕ್ಕೆ ಇನ್ನಷ್ಟು ಕಾಲ ದಕ್ಕುವಂತಾಗಲಿ.
- ರಾಜಾರಾಮ್ ತಲ್ಲೂರ್, ಹಿರಿಯ ಪತ್ರಕರ್ತರು



