ಮೇಲ್ಜಾತಿಗೆ ಶೇ. 10 ಮೀಸಲಾತಿ: ಎಚ್ಚೆತ್ತುಕೊಳ್ಳದಿದ್ದರೆ ಹೇಗೆ?

5 years ago

ಈ ಲೇಖನ ಮಹಾಪ್ರಾಣಗಳನ್ನು ಕಡಿಮೆ ಬಳಸುವ ಮಾದರಿಯಲ್ಲಿದೆ.

https://www.facebook.com/photo?fbid=4573537682657648&set=pcb.4573537785990971

13 ಜನವರಿ 2018ರಂದು ಸಂವಿದಾನದ ಪರಿಚ್ಚೇದ 16ಕ್ಕೆ clause 6 ಸೇರಿಸಿ “ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ews) (ಪರಿಚ್ಚೇದ 16 (4) ಅಡಿಯಲ್ಲಿ ಬರುವ ಜಾತಿಗಳನ್ನು ಹೊರತುಪಡಿಸಿ) ಶೇ. 10 ಪ್ರಮಾಣದ ಮೀಸಲಾತಿ ಕಲ್ಪಿಸುವ” 103ನೇ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಮುದ್ರೆಯೊತ್ತಿದ್ದರು.

ಲೋಕಸಬೆಯಲ್ಲಿ 323 ಸಂಸದರು ಪರವಾಗಿ 3 ಸಂಸದರು ವಿರೋದವಾಗಿ ಮತ ಚಲಾಯಿಸಿದರು. ಮಿಕ್ಕ ಸಂಸದರು ಸಬಾತ್ಯಾಗ ಮಾಡಿದರು ಅಥವಾ ಬಾಗವಹಿಸಲಿಲ್ಲ.

ರಾಜ್ಯಸಬೆಯಲ್ಲಿ 165 ಸಂಸದರು ಪರವಾಗಿ 7 ಸದಸ್ಯರು ವಿರೋದವಾಗಿ ಮತ ಚಲಾಯಿಸಿದರು. ಡಿಎಂಕೆ ಮತ್ತು ಒಂದೆರಡು ಪಕ್ಷಗಳು ಮಾತ್ರ ಇದನ್ನು ಬಲವಾಗಿ ವಿರೋದಿಸಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಈ ews ಮೀಸಲಾತಿ ಭಗ್ನಗೊಳಿಸಿದೆ. ewsಗೆ ಈ ಸೌಲಬ್ಯ ನೀಡುವುದರ ಮೂಲಕ ವ್ಯವಸ್ಥೆಯ ಕೆಳಸ್ತರದಲ್ಲಿರುವ ಸಮುದಾಯಗಳ ಮೇಲ್ಮುಖ ಚಲನೆಗೆ ಅವಕಾಶ ಕಲ್ಪಿಸುವ ಮೀಸಲಾತಿ ಉದ್ದೇಶವನ್ನು  ಸೋಲಿಸಲಾಯಿತು. ಮತ್ತು  ವೋಟ್ ಬ್ಯಾಂಕ್ ರಾಜಕಾರಣದ ಸಲುವಾಗಿ ಈ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೆ ದ್ರೋಹ ಬಗೆಯುವ ಬಿಜೆಪಿ ಪಕ್ಷದ ಜೊತೆಗೆ ಡಿಎಂಕೆ ಹೊರತುಪಡಿಸಿ ಇತರೆ ರಾಜಕೀಯ ಪಕ್ಷಗಳು ಕೈ ಜೋಡಿಸಿದವು.

ಇದು ಮೊದಲ ಹಂತ

ews ಗೆ 8 ಲಕ್ಷ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ  ಪ.ಜಾತಿ/ಪ.ಪಂಗಡಗಳಿಗೆ (ews ಅಡಿಯಲ್ಲಿ ಬರುವುದಿಲ್ಲ) 2.5 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಇದು ಯಾವ ತರ್ಕದ, ಆದಾರದ ಮೇಲೆ? ಯಾವ ಸಾಮಾಜಿಕ-ಆರ್ಥಿಕ  ಅಧ್ಯಯನ ಮೇಲೆ? ಎಲ್ಲಿಯೂ ಉತ್ತರವಿಲ್ಲ.

ಇದು ಎರಡನೇ ಹಂತ

ಕೇಂದ್ರ ಸರಕಾರದ ಹುದ್ದೆಗಳಿಗೆ ಮತ್ತು ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಶೇ. 10% ಪ್ರಮಾಣದ  ಮೀಸಲಾತಿಗೆ ಅರ್ಹ ಜಾತಿಗಳ ಪಟ್ಟಿಯನ್ನು ಲಗತ್ತಿಸಿದ್ದೇನೆ. ಯಾರ್ಯಾರು ಮಂಡಲ್  ಆಯೋಗದ ಅನುಸಾರ ಶೇ. 27% ಮೀಸಲಾತಿ ಪಟ್ಟಿಯ ಅಡಿಯಲ್ಲಿ ಬರುವುದಿಲ್ಲವೋ ಅವರು EWS ಗೆ ಅರ್ಹರಾಗಿರುತ್ತಾರೆ. (ಕೇಂದ್ರದ ಹುದ್ದೆ ಮತ್ತು ವ್ಯಾಸಂಗಕ್ಕೆ ಮಾತ್ರ)

 ರಾಜ್ಯದ ಅರ್ಹರ ಪಟ್ಟಿ ಇನ್ನೂ ತಯಾರಾಗಿಲ್ಲ

ಈ ಪಟ್ಟಿಯಲ್ಲಿರುವ 139 ಇತರೇ ಹಿಂದುಳಿದ  ಜಾತಿಗಳ ಜೊತೆಗೆ  ಕ್ರಮ ಸಂಖ್ಯೆ 140-144ರ ಅನುಸಾರ ಮುಂದುವರೆದ ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಾಯರ್, ಮೊದಲಿಯಾರ್ ಮೇಲ್ಜಾತಿಗಳು ಸಹ EWS 10% ಮೀಸಲಾತಿಗೆ ಅರ್ಹರಾಗುತ್ತಾರೆ.

ಅಂದರೆ ಈ 10% ಮೀಸಲಾತಿಯ ಬಹುಪಾಲನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಈ ಮೇಲ್ಜಾತಿಗಳು ಅದರಲ್ಲೂ ಬ್ರಾಹ್ಮಣರು ಪಡೆದುಕೊಳ್ಳುತ್ತಾರೆ. ಹಿಂದುಳಿದ ಸಮುದಾಯಗಳು ತಾವು EWS ಅಡಿಯಲ್ಲಿ ಅರ್ಹರು ಎಂದು ಬ್ರಾಂತಿಯಲ್ಲಿರುತ್ತಾರೆ. ಆದರೆ ಈ ಒಳ ಮೋಸಗಳ ಅರಿವಿಲ್ಲದೆ ವಂಚನೆಗೊಳಗಾಗುತ್ತಾರೆ. ಮತ್ತು ಬಿಜೆಪಿ ಪಕ್ಷಕ್ಕೆ ಮತಗಳ ಪ್ರಮಾಣ ಮತ್ತಶ್ಟು ಹೆಚ್ಚಾಗುತ್ತದೆ.

ನೋಡಿ ಮೇಲ್ಜಾತಿಗಳು ಮತ್ತು ಹಿಂದುಳಿದವರನ್ನು ಒಂದೇ ತಕ್ಕಡಿಯಲ್ಲಿಟ್ಟು, ಅವರ ನಡುವೆ ಸ್ಪರ್ದೆ ಏರ್ಪಡಿಸಿದ ದೇಶ ನಮ್ಮದು!! ನಮ್ಮ ಕಣ್ಣು ಮುಂದೆಯೇ ಸಾಮಾಜಿಕ ನ್ಯಾಯದ ಆಶಯಗಳು ನಾಶವಾಗುತ್ತಿದೆ, ನಾವು ಮೌನವಾಗಿದ್ದೇವೆ.

ವಂಚಿತ ಸಮುದಾಯಗಳ ಮೀಸಲಾತಿಗೆ ದಶಕಗಳ ಕಾಲ ಹೋರಾಟ ನಡೆಯಬೇಕಾಯಿತು. ಅವಮಾನವನ್ನು ಅನುಬವಿಸಬೇಕಾಯಿತು. ಆದರೆ ಮೇಲ್ಜಾತಿಗಳಿಗೆ ಯಾವುದೇ ಶ್ರಮವಿಲ್ಲದೆ ಮೀಸಲಾತಿ ದೊರಕುತ್ತಿದೆ. ಮತ್ತು ನೀವು  ಮೀಸಲಾತಿಯನ್ನು ವಿರೋದಿಸಿದ್ದೀರಿ, ಈಗ ಹೇಗೆ ಪಡೆದುಕೊಳ್ಳುತ್ತೀರಿ ಎಂದು ಸಹ ಇವರನ್ನು ಪ್ರಶ್ನಿಸುತ್ತಿಲ್ಲ.

ಇದು ಮೂರನೆಯ ಹಂತ

ಆದರೆ ಇದು ಕೊನೆಯ ಹಂತವಾಗದಂತೆ ಎಚ್ಚರವಹಿಸಿ ಸಾಮಾಜಿಕ ನ್ಯಾಯದ ಆಶಯಗಳನ್ನು, ನೈತಿಕತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ

– ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply