ಬೆಂಗಳೂರು: ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ 2023ರ ಜನವರಿ ೦6 ಶುಕ್ರವಾರ, ೦7 ಶನಿವಾರ ಹಾಗೂ ೦8 ಭಾನುವಾರದವರೆಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ ಕನ್ನಡ ರಥದ ಜಾಥಾವನ್ನು ಪರಿಷತ್ತು ಹಮ್ಮಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯಲ್ಲಿರುವ ತಾಯಿ ಕನ್ನಡ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಜ್ಯೋತಿಯನ್ನು ಕನ್ನಡದ ರಥದಲ್ಲಿ ತೆಗೆದುಕೊಂಡು, ನಾಡಿನಾದ್ಯಂತ ಪ್ರಮುಖ ಸ್ಥಳಗಳಲ್ಲಿ ಸಂಚರಿಸುವುದರ ಜೊತೆಗೆ ಸಮ್ಮೇಳನದ ಮುಂಚಿತವಾಗಿ ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಜಾಥಾ ನಡೆಸಿ, ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡು, ನಂತರ ಅದೇ ಜ್ಯೋತಿಯಿಂದ ದಿನಾಂಕ 06 ಜನವರಿ 2023 ರಂದು ಜರುಗುವ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸುವ ಆಶಯವನ್ನು ಹೊಂದಲಾಗಿದೆ.
ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥದ ಜಾಥಾ ಇಂದು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಡಿಸೆಂಬರ್ ೧೬ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಆವರಣದಲ್ಲಿ ರಥಕ್ಕೆ ಸ್ವಾಗತಿಸಿ ಪೂಜೆ ಸಲ್ಲಿಸಲಾಗುವುದು. ನಂತರ ವಿವಿಧ ಕಲಾತಂಡಗಳೊಂದಿಗೆ ಕನ್ನಡ ರಥದ ಜಾಥಾ ನಗರದಲ್ಲಿ ಸಂಚರಿಸಲಿದೆ.
ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ ಕುಮಾರ, ಸಾರಿಗೆ ಸಚಿವ ಶ್ರೀರಾಮಲು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹಾಗೂ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.



