ಬಿಜೆಪಿ ಎಂಪಿಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ಕುಸ್ತಿ ಪಟುವನ್ನು ಸಂತೈಸುತ್ತಿರುವ ಪ್ರಿಯಾಂಕ

3 years ago

ಬಿಜೆಪಿ ಎಂಪಿಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ಕುಸ್ತಿ ಪಟುವನ್ನು ಸಂತೈಸುತ್ತಿರುವ ಪ್ರಿಯಾಂಕ

ಕಳೆದ ಜನವರಿಯಲ್ಲಿ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳಾದ ವಿನೇಶಾ ಪೋಗಟ್, ಸಾಕ್ಷಿ‌ ಮಲ್ಲಿಕ್ ಲೈಂಗಿಕ ಕಿರುಕುಳದ ಆರೋಪ ಮಾಡಿ ಆತನ‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಕುಳಿತಿದ್ರು. ಅವರಿಗೆ ಪುರುಷ ಕ್ರೀಡಾಪಟುಗಳೂ ಬೆಂಬಲ ನೀಡಿದ್ದರು.

ಕ್ರೀಡಾ ಸಚಿವರು ಅದೇನೋ ಸುಳ್ಳು ಭರವಸೆ ಕೊಟ್ಟು ಧರಣಿ ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ರು.‌ ಅದಾಗಿ ಐದು ತಿಂಗಳಾದರೂ ಆರೋಪಿ ಸಂಸದನ ವಿರುದ್ಧ ಒಂದು ಎಫ್ ಐಆರ್ ಕೂಡಾ ದಾಖಲಿಸಿರಲಿಲ್ಲ. ಕಳೆದ ಐದು ದಿನಗಳಿಂದ ಮತ್ತೆ ವಿನೇಶಾ ತಂಡ ಧರಣಿ ಕುಳಿತಿದ್ದಾರೆ. ನಿನ್ನೆಯಷ್ಟೇ FIR ಆಗಿದೆ. ಯಾವುದೇ ಕಾರಣಕ್ಕೂ ಕುಸ್ತಿ ಫೆಡರೇಷನ್ ಗೆ ರಾಜೀನಾಮೆ ಕೊಡಲ್ಲ‌ ಎಂದು ಆರೋಪಿ ಸವಾಲು ಹಾಕಿದ್ದಾನೆ.

ಇದೇ ವಿನೇಶಾ ಪೋಗಟ್ ಕಳೆದ ವರ್ಷ ನಡೆದ ಒಲಿಂಪಿಕ್ ನಲ್ಲಿ ಪದಕ ಗೆಲ್ಲಲು ವಿಫಲರಾದರೂ ಪ್ರಧಾನಿ ಮೋದಿ ತಮ್ಮ ಮನೆಗೆ ಕರೆಸಿ ಮಗಳೇ ಎಂದು ಕರೆದು ಸತ್ಕಾರ ಮಾಡಿದ್ರು. ಆತ್ಮಸ್ಥೈರ್ಯ ತುಂಬಿದ್ರು. ಭರ್ಜರಿ ಫೋಟೋ ಶೂಟ್ ಮಾಡಿಸಿಕೊಂಡ್ರು. ಆದರೆ ಅದೇ ಮಗಳಿಗೆ ಲೈಂಗಿಕ ಕಿರುಕುಳ‌ ಕೊಟ್ಟ ಖೂಳನನ್ನು ಕನಿಷ್ಠ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿಲ್ಲ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಈ ಅಪ್ಪನಿಗೆ ಸಾಧ್ಯವಾಗಿಲ್ಲ ಅಂದ್ರೆ ಯಾರಿಗೆ ಕಳಂಕ? ಈಗ ದೇಶದ ಮಾನ ವಿಶ್ವಮಟ್ಟದಲ್ಲಿ ಹರಾಜಾಗುತ್ತಿಲ್ಲವೇ?

ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸುವಲ್ಲಿ, ಮನೆ ಖಾಲಿ ಮಾಡಿಸೋದರಲ್ಲಿ ಇರುವ ಆತುರ ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಗೆ ಈ ವಿಷಯದಲ್ಲಿ ಯಾಕಿಲ್ಲ? ರಾಷ್ಟ್ರಪತಿ ಮುರ್ಮು ಅವರ ಮೌನವೇ ಈ ದೇಶಕ್ಕೆ ದೊಡ್ಡ ಕಳಂಕ.

ಈಗ ಪ್ರಾಣಿಪ್ರೇಮಿ‌ ಮನೇಕಾ ಗಾಂಧಿ ಎಲ್ಲಿದ್ದಾರೆ? ದಿನ ಬೆಳಗಾದರೆ ಮೇಡಂ ಸೋನಿಯಾ ಮೇಲೆ ವಿಷಕಾರುವ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಅವರ ಬಾಯಿಗೆ ಲಕ್ವ ಹೊಡೆದಿದೆಯಾ?

ಸಿಲಿಂಡರ್ ಬಗ್ಗೆ ಪ್ರಶ್ನೆ ಕೇಳಿದ್ರೆ ಪ್ರೆಸ್ ಮೀಟ್ ನಿಂದ ಎದ್ದು ಹೋಗುವ, ನಿರುದ್ಯೋಗಕ್ಕೆ ಪದವೀಧರರು ಹೆಚ್ಚಿರುವುದು ಕಾರಣ ಎಂಬ ಅದ್ಭುತ ಸಂಶೋಧನೆ ಮಾಡಿರುವ ಶೋಭಾ ಕರಂದ್ಲಾಜೆ ಅವರಿಗೆ ಲವ್ ಜಿಹಾದ್ ಬಗ್ಗೆ ಇರುವ ಆತಂಕ‌‌, ಆ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಇರುವ ಕಾಳಜಿ ಒಬ್ಬ ಸಂಸದನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಹೆಣ್ಣುಮಕ್ಕಳ ಮೇಲೆ ಯಾಕಿಲ್ಲ?

– ಹೇಮಾ ವೆಂಕಟ್

Leave a Reply