ಧರ್ಮ, ದೇವರ ವಿಚಾರಗಳಿಗೆ ಸೀಮಿತವಾದ ಪ್ರಧಾನಿ ಭಾಷಣಗಳು

2 years ago

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಂದ ದೇಶದ ಜನತೆ ಬಯಸುವಂತಹ ವಿಚಾರಗಳು ಮತ್ತು ಜನರಲ್ಲಿ ಚರ್ಚೆಗೆ ಒಳಪಡಬೇಕಾಗಿರುವ ಪ್ರಮುಖವಾದಂತಹ ವಿಷಯಗಳ ಬಗ್ಗೆ ಎಲ್ಲಿಯೂ ಪ್ರಧಾನಮಂತ್ರಿಗಳು ಚಕಾರವೆತ್ತದೆ, ಕೇವಲ ದೇವರು ಮತ್ತು ಧರ್ಮದ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾ ತಮ್ಮ ಚುನಾವಣಾ ಭಾಷಣವನ್ನು ಮುಂದುವರೆಸಿದ್ದಾರೆ. ಮಾರಿಕೊಂಡ ಮಾಧ್ಯಮದವರು ಇದನ್ನೇ ದೊಡ್ಡ ತಂತ್ರಗಾರಿಕೆ ಎಂದು ಉಪಕಥೆಗಳೊಂದಿಗೆ ಸುದ್ದಿಯನ್ನು ಪ್ರಕಟಿಸುತ್ತಾ ತಮ್ಮ ಋಣ ತೀರಿಸುತ್ತಿವೆ.

ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪವಾಗಬೇಕಾದದ್ದು ವಿದೇಶಾಂಗ ನೀತಿ. ಈ ಬಗ್ಗೆ ಪ್ರಧಾನಮಂತ್ರಿಗಳು ಎಲ್ಲಿಯೂ ಮಾತನಾಡುವುದಿಲ್ಲ. ನೆಹರೂರವರು ತಂದ ಅಲಿಪ್ತ ನೀತಿ ಭಾರತ ದೇಶದ ವಿದೇಶಾಂಗ ನೀತಿಯ ಆಶಯಗಳಾಗಿವೆ. ಈ ವಿಚಾರದಲ್ಲಿ ಪ್ರಧಾನಮಂತ್ರಿಗಳು ನೆರೆಹೊರೆ ರಾಷ್ಟ್ರಗಳ ಬಾಂಧವ್ಯದ ವಿಚಾರದಲ್ಲಿ ತಾವು ಅನುಸರಿಸಿದ ಕ್ರಮಗಳ ಬಗ್ಗೆ ನೆರೆಹೊರೆ ರಾಷ್ಟ್ರಗಳಿಂದ ತಮಗೆ ತೊಂದರೆಯಾದಾಗ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ಆರ್ಥಿಕ ನೀತಿಯ ಬಗ್ಗೆ ಚರ್ಚೆಯಾಗಬೇಕು. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಸಾಲದ ಪ್ರಮಾಣ ಎಷ್ಟಾಗಿದೆ? ಸಾಲಗಳನ್ನು ಏಕೆ ಮಾಡಿದ್ದೇವೆ? ದೇಶದ ಜನರ ಆದಾಯದ ಪ್ರಮಾಣ ಏನಾಗಿದೆ? ಈ ವಿಚಾರಗಳ ಬಗ್ಗೆ ಯಾವ ವೇದಿಕೆಯಲ್ಲೂ ಹೇಳುವುದಿಲ್ಲ.

ಲೋಕಸಭಾ ಚುನಾವಣೆ ವೇಳೆಯಲ್ಲಿ ಕೈಗಾರಿಕಾ ನೀತಿಯ ಬಗ್ಗೆ ಚರ್ಚೆಯಾಗಬೇಕು. ಆದರೆ ನಮ್ಮ ಪ್ರಧಾನಮಂತ್ರಿಗಳು ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿದ್ದೇವೆ? ಎಷ್ಟು ಉದ್ಯೋಗವನ್ನು ಕೊಟ್ಟಿದ್ದೇವೆ? ನಮ್ಮ ಕೈಗಾರಿಕಾ ನೀತಿಗಳಿಂದ ದೇಶದ ಪ್ರಗತಿಗೆ ಎಷ್ಟು ಅನುಕೂಲವಾಗಿದೆ ಎಂಬ ಯಾವ ವಿಚಾರಗಳನ್ನು ಯಾವ ವೇದಿಕೆಯಲ್ಲೂ ಹೇಳುವುದಿಲ್ಲ.

ಲೋಕಸಭಾ ಚುನಾವಣೆ ವೇಳೆಯಲ್ಲಿ ದೇಶದ ಸಾಂಸ್ಕೃತಿಕ ನೀತಿ ಏನಿರಬೇಕು ಎಂಬ ಚರ್ಚೆಯಾಗಬೇಕು. ಆದರೆ ನಮ್ಮ ಪ್ರಧಾನಮಂತ್ರಿಗಳಿಗೆ ಸಾಂಸ್ಕೃತಿಕ ನೀತಿಯ ಪರಿಚಯವೇ ಇದ್ದಂತಿಲ್ಲ. ಸಾಂಸ್ಕೃತಿಕ ನೀತಿ ಸಾಮರಸ್ಯದ ತಳಹದಿಯ ಮೇಲೆ ಕಟ್ಟುವಂಥದ್ದು ಪ್ರಧಾನಮಂತ್ರಿಗಳು ಕೇವಲ ಧರ್ಮಾಧಾರಿತ ಮಾತುಗಳನ್ನು ಆಡುವುದರಿಂದ ಇನ್ನು ಈ ವಿಚಾರದ ಬಗ್ಗೆ ಪ್ರಸ್ತಾಪಿಸುವುದು ನಮ್ಮ ದಡ್ಡತನವಾಗುತ್ತದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಂಗತಿಗಳು, ಅಂತರಾಷ್ಟ್ರೀಯ ಬೆಳವಣಿಗೆಗಳು, ಈ ವಿಚಾರದಲ್ಲಿ ನಮ್ಮ ದೇಶ ಅನುಸರಿಸಿದ ಮಾರ್ಗಗಳು ಯಾವುದು? ಇದರಿಂದ ನಮ್ಮ ದೇಶದ ಬಾಂಧವ್ಯಗಳಿಗೆ ಎಷ್ಟು ಸಹಕಾರಿಯಾಯಿತು? ಈ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಇವುಗಳು ಎಲ್ಲೂ ಪ್ರಸ್ತಾಪವಾಗುತ್ತಿಲ್ಲ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ನಿರುದ್ಯೋಗದ ಸಮಸ್ಯೆಯ ಬಗ್ಗೆ ಚರ್ಚೆಯಾಗಬೇಕಿತ್ತು. ನಿರುದ್ಯೋಗದ ಪ್ರಮಾಣ ಎಷ್ಟಿದೆ? ನಿರುದ್ಯೋಗದ ಪ್ರಮಾಣವನ್ನ ಕಡಿಮೆ ಮಾಡಲು ಕೈಗೊಂಡ ಕ್ರಮಗಳೇನು? ನಿರುದ್ಯೋಗಿಗಳ ಬದುಕಿಗೆ ಆಸರೆಯಾಗಿ ನಿಲ್ಲಲು ತೆಗೆದುಕೊಂಡಂತಹ ಕ್ರಮಗಳು, ಜಾರಿಗೆ ತಂದ ಯೋಜನೆಗಳು, ಇವುಗಳ ಬಗ್ಗೆ ಪ್ರಧಾನಮಂತ್ರಿಗಳು ಎಲ್ಲಿಯೂ ಮಾತನಾಡುವುದಿಲ್ಲ.

ಕಾರಣ 2014ರಲ್ಲಿ ತಾವು ಅಧಿಕಾರಕ್ಕೆ ಬಂದರೆ ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ 10 ವರ್ಷದ ಅವಧಿಯಲ್ಲಿ 20 ಕೋಟಿ ಉದ್ಯೋಗದ ಬದಲಿಗೆ 20 ಲಕ್ಷ ಉದ್ಯೋಗಗಳನ್ನು ಕೂಡ ಸೃಷ್ಟಿಸಲಾಗಲಿಲ್ಲ. ಲಕ್ಷಾಂತರ ಉದ್ಯೋಗಸ್ಥರು ನಮ್ಮ ದೇಶದ ಆರ್ಥಿಕ ನೀತಿ ರಫ್ತು ನೀತಿ ಇವುಗಳಿಂದ ಉದ್ಯೋಗಗಳನ್ನು ಕಳೆದುಕೊಂಡರು. ಕೈಗಾರಿಕೆಗಳು ಮುಚ್ಚಲ್ಪಟ್ಟವು. ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದರು. ಕೇವಲ ಕೇಂದ್ರ ಸರ್ಕಾರದ ಕೆಲವು ಸಾವಿರ ಹುದ್ದೆಗಳನ್ನು ನೀಡುವ ಸಾಮಾನ್ಯವಾದ ಪ್ರಕ್ರಿಯೆಗೆ ಪ್ರಧಾನಮಂತ್ರಿಗಳು ತಮ್ಮ ಜಾಹೀರಾತು ನೀಡುವುದರ ಮೂಲಕ ಕೇಂದ್ರ ಸರ್ಕಾರದ ಉದ್ಯೋಗವನ್ನು ಕೊಟ್ಟಂತಹ ಪ್ರಚಾರವನ್ನು ಪಡೆದಿದ್ದಾರೆ.

ಲೋಕಸಭಾ ಚುನಾವಣೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಾಂಧವ್ಯ, ಇವುಗಳ ಬೆಳವಣಿಗೆಗೆ ಕೇಂದ್ರ ಸರಕಾರ ನೀಡಿದಂತಹ ಕಾರ್ಯಕ್ರಮಗಳು, ರಾಜ್ಯ ಸರ್ಕಾರಗಳ ನಡುವಿನ ಸಂಬಂಧದಲ್ಲಿ ಅನುಸರಿಸಿದಂತಹ ಮಾರ್ಗಗಳು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಸಾಮರಸ್ಯವನ್ನು ಉಂಟುಮಾಡಲು ತಾವು ಏನು ಮಾಡುತ್ತೇವೆ ಎನ್ನುವ ಯಾವ ಮಾತುಗಳನ್ನು ಆಡುತ್ತಿಲ್ಲ.

ಎಲ್ಲ ಭಾಷಣಗಳಲ್ಲಿ ದೇಶದಲ್ಲಿ ಎಲ್ಲಾ ನಡೆಯುತ್ತಿರುವುದು ತಮ್ಮಿಂದಲೇ, ಎಲ್ಲ ಬೆಳವಣಿಗೆಗೆ ತಾವೇ ಕಾರಣ, ಎಲ್ಲ ಜನರು ಊಟ ಮಾಡುತ್ತಿರುವುದು ತಮ್ಮಿಂದಲೇ, ತಾವು ಇಲ್ಲದಿದ್ದರೆ ದೇಶವೇ ಇಲ್ಲ ಎನ್ನುವ ರೀತಿಯಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ, ಮಾರಿಕೊಂಡ ಮಾಧ್ಯಮಗಳ ಮೂಲಕ ಎಲ್ಲದಕ್ಕೂ ಪ್ರಚಾರ ಪಡೆದುಕೊಳ್ಳುತ್ತಾ ಚುನಾವಣೆಯ ಭಾಷಣಗಳನ್ನ ಕೇವಲ ಸಾಧನೆಯನ್ನು ಹೇಳುವುದಕ್ಕಿಂತ ವಿರೋಧ ಪಕ್ಷದವರನ್ನು ಅದರಲ್ಲೂ ಸತ್ತು ಸ್ವರ್ಗ ಸೇರಿರುವ ನಾಯಕರುಗಳನ್ನ ಟೀಕಿಸುತ್ತ ದ್ವೇಷದ ಮಾತುಗಳನ್ನಾಡುತ್ತಾ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಅಪನಂಬಿಕೆ ಅವಿಶ್ವಾಸವನ್ನು ಉಂಟುಮಾಡುವ ವಿಚಾರಗಳನ್ನ ಪ್ರಸ್ತಾಪಿಸುತ್ತಾ, ಯಾವುದೋ ಮೂಲೆಯಲ್ಲಿ ನಡೆದಿರುವ ಸ್ಥಳೀಯ ಘಟನೆಗಳನ್ನು ರಾಷ್ಟ್ರದ ಪ್ರಮುಖ ಘಟನೆಗಳೆಂದು, ಅದಕ್ಕೆ ಧರ್ಮದ ಲೇಪನವನ್ನು ನೀಡಿ, ವೈಭವೀಕರಿಸಿ ಅಬ್ಬರದ ಮಾತುಗಳನ್ನ ಆಡುತ್ತಲೇ ಚುನಾವಣೆಯನ್ನ ನಡೆಸುತ್ತಿದ್ದಾರೆ.

ಏಳು ಹಂತದ ಚುನಾವಣೆಯಲ್ಲಿ ಪ್ರತಿಯೊಂದು ಹಂತಕ್ಕೂ ನಿರ್ದಿಷ್ಟವಾದ ವಿಚಾರಗಳನ್ನು ಪ್ರಚಾರ ಮಾಡುತ್ತಾ, ಒಟ್ಟಾರೆಯಾಗಿ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸಿಂಹಾಸನದಲ್ಲಿ ಕುಳಿತು ಮತ್ತಷ್ಟು ಭರವಸೆಗಳನ್ನ ನೀಡಿ ಸಂಭ್ರಮಿಸುವ ಹಾದಿಯಲ್ಲಿದ್ದಾರೆ. ದುರಂತವೆಂದರೆ ಯಾವ ಮಾಧ್ಯಮದವರು ಪ್ರಮುಖವಾದ ವಿಚಾರಗಳ ಬಗ್ಗೆ ಪ್ರಧಾನಿಗಳು ಮಾತನಾಡುತ್ತಿಲ್ಲ ಎಂದು ಹೇಳುತ್ತಲೇ ಇಲ್ಲ. ಆ ವಿಚಾರವನ್ನು ಕನಿಷ್ಠ ಪಕ್ಷ ತಮ್ಮ ಸುದ್ದಿಗಳಲ್ಲೂ ಹೇಳುತ್ತಿಲ್ಲ. ಇದೊಂದು ದುರಂತವೇ ಸರಿ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply