ಬೆಂಗಳೂರು: ರಾಜಕಾರಣವೂ ಸೇರಿದಂತೆ ಹಲವಾರು ಕಾರಣದಿಂದ ಮುಂದೂಡಲ್ಪಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಬರುವ ಡಿಸೆಂಬರ್ ನಲ್ಲಿ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಮಂತ್ರಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸಂಬಂಧಿಸಿದ ರಾಜ್ಯದ ಎಲ್ಲಾ ದೇಗುಲಗಳಲ್ಲಿಬ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ನೇರ ವಿಶೇಷ ದರ್ಶನ ವ್ಯವಸ್ಥೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಿಬಿಎಂಪಿಗೆ ಚುನಾವಣೆ ಬೇಗ ಆಗಬೇಕು ಎಂಬ ಉದ್ದೇಶ ಹೊಂದಿದ್ದೇವೆ.ಅದಕ್ಕಾಗಿ ನಮ್ಮ ಪಕ್ಷದವರೇ ನ್ಯಾಯಾಲಯದ ಮೊರೆ ಹೋಗಿದ್ದು, ಆದರೆ, ಬಿಜೆಪಿಯವರು ವಾರ್ಡ್‍ಗಳ ವಿಂಗಡಣೆಯನ್ನು ಮನಸೋ ಇಚ್ಚೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ ಎಂದರು.
ವಾರ್ಡ್ ವಿಂಗಡನೆ ವಿಚಾರವನ್ನು ಅಧಿಕಾರಗಳ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ. ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಪ್ರಾದೇಶಿಕ ವಿಂಗಡನೆ ಮಾಡಿದ್ದೆವು. ಯಾರು ಸಹ ಕೋರ್ಟ್‍ಗೆ ಹೋಗಿರಲಿಲ್ಲ. ಆದರೆ, ಬಿಜೆಪಿಯವರು ರಾಜಕೀಯವಾಗಿ ವಾರ್ಡ್‍ಗಳ ಪುನರ್ ವಿಂಗಡನೆ ಮಾಡಿದ್ದಾರೆ. ಹಾಗಾಗಿ ಮತ್ತೆ ಹೊಸದಾಗಿ ವಾರ್ಡ್‍ಗಳ ಪುನರ್ ವಿಂಗಡನೆ ಮಾಡಲು ತಿಳಿಸಲಾಗಿದೆ ಬಿಬಿಎಂಪಿ ಹೊಸ ಕಾಯ್ದೆ ಪ್ರಕಾರ 243 ವಾರ್ಡ್ ಗಳಿಗೆ ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಕಾಲದಲ್ಲೂ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಿದ್ದೇವೆ. ಈ ಬಾರಿಯೂ ನಾವು ಅದೇ ರೀತಿ ಚುನಾವಣೆ ಮಾಡುತ್ತೆವೆ ಎಂದರು.



