ಡಾ.ಬಿ.ಆರ್.ಅಂಬೇಡ್ಕರ್ ಅಸ್ಮಿತೆಯ ಕುರುಹುಗಳನ್ನು ಇಲ್ಲಿನ ಪ್ರಭುತ್ವ ಎಂದಿಗೂ ಸಹಿಸಿಕೊಳ್ಳಲಾರದು?

3 years ago

ಚನ್ನಪಟ್ಟಣದ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಚರಿತ್ರೆಯ ಒಳನೋಟಗಳನ್ನು ತೆರೆದರೆ ಕರಾಳ ಸತ್ಯಗಳು ಅನಾವರಣಗೊಳ್ಳುತ್ತವೆ. ಅಲ್ಲಲ್ಲಿ ಮೀಸಲಾತಿಯ ಕಾರಣಕ್ಕೆ ಸೂಜಿ ಮೊನೆಗಾತ್ರದ ಪ್ರಾತಿನಿಧ್ಯ ದೊರಕಿರುವುದನ್ನು ಬಿಟ್ಟರೆ ಉಳಿದಂತೆ ಆಕಾಶಕಾಯ ಗಾತ್ರದ ಉಂಡೆ ಭಾಗವನ್ನೆಲ್ಲ ಉಂಡುಂಡೆಯಾಗಿ ನುಂಗಿದ ಪ್ರಭುತ್ವವು ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳನ್ನು ಹೇಗೆ ಸಹಿಸಿಕೊಳ್ಳುತ್ತದೆ. 1952ರ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯ ತನಕ ಶಾಸಕ ಸ್ಥಾನವನ್ನು ಆಕ್ರಮಿಸಿ ಕೊಂಡಿರುವ ಪ್ರಭುತ್ವಕ್ಕೆ ಒಂದಿಂಚು ಕರುಣೆ ಎಂಬುದು ಇದ್ದಿದ್ದರೆ ಒಂದು ಬಾರಿಯಾದರೂ ದಲಿತರಿಗೆ ಆ ಸ್ಥಾನವನ್ನು ಬಿಟ್ಟು ಕೊಡಬಹುದಿತ್ತು. ಕೇವಲ ಚನ್ನಪಟ್ಟಣ ಮಾತ್ರವಲ್ಲ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಯೂ ಶಾಸಕ ಸ್ಥಾನ ಯಾರ ಅಂಗಳದಲ್ಲಿ ಬಿದ್ದು ಬೆತ್ತಲೆಯಾಗಿ ರಾರಾಜಿಸುತ್ತಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. ಏಳು ದಶಕಗಳ ಕಾಲದ ಶಾಸಕ ಸ್ಥಾನದ ಸಾಮ್ರಾಜ್ಯದ ಸುಖವನ್ನು ಅನುಭವಿಸಿದ ಪ್ರಭುತ್ವವು ದಲಿತ ಕೇರಿಗಳಲ್ಲಿ ನಿಂತು ಮತವನ್ನು ಗುಡ್ಡೆಗುಡ್ಡೆಯಾಗಿ ಹಣ ಕೊಟ್ಟು ಖರೀದಿಸಿ ಗದ್ದುಗೆ ಹೇರಿದ ಮೇಲೆ ನೀತಿ ಪಾಠ ಹೇಳಿದ್ದನ್ನು ಕಣ್ಣಾರೆ ಕಂಡಿದ್ದೇವೆ.

1) ಇಲ್ಲಿಯ ತನಕ 17 ಶಾಸಕರು ಚನ್ನಪಟ್ಟಣವನ್ನು ಆಳಿದ್ದಾರೆ. ಬೆಸ್ತ ಸಮುದಾಯದ ಡಿ ಟಿ ರಾಮು, ಮುಸ್ಲಿಂ ಸಮುದಾಯದ ಸಾದತ್ ಆಲಿಖಾನ್ ಬಿಟ್ಟರೆ 15 ಸ್ಥಾನಗಳು ಯಾರ ಪಾಲಾಗಿವೆ.

2) ಬೆಮಲ್ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯನ್ನು ಅದರಲ್ಲೂ ಚನ್ನಪಟ್ಟಣವನ್ನು ಇಲ್ಲಿಯ ತನಕ ಪ್ರತಿನಿಧಿಸಿರುತ್ತಿರುವ ಸಮುದಾಯ ಯಾವುದು ?

3) ಚನ್ನಪಟ್ಟಣ ತಾಲೂಕಿನ ಹಾಲಿನ ಡೈರಿ ಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಅನುಭವಿಸುತ್ತಿರುವ ಸಮುದಾಯ ಯಾವುದು.

4) ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಕಟ್ಟಲು 25 ವರ್ಷಗಳನ್ನು ತೆಗೆದುಕೊಂಡ ಶಾಸಕರುಗಳು ಯಾವ ಸಮುದಾಯಕ್ಕೆ ಸೇರಿದವರು ? ಡಾ.ಬಿ.ಆರ್.ಅಂಬೇಡ್ಕರ್ ಭವನ ಕಟ್ಟಿದರು ಅದು ಡಾ.ಬಿ.ಆರ್.ಅಂಬೇಡ್ಕರ್ ಭವನವಾಗದೆ ಕುರಿದೊಡ್ಡಿಯಂತೆ ಮಾಡಲಾಗಿದೆ ಇದಕ್ಕೆ ಕಾರಣವೇನು?

5) ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಇಲ್ಲಿಯ ತನಕ ಯಾವ ಸಮುದಾಯದವರು ಅನುಭವಿಸುತ್ತಿದ್ದಾರೆ. ತಾಲೂಕು ಅಧ್ಯಕ್ಷ ಸ್ಥಾನವನ್ನು ಇಲ್ಲಿಯ ತನಕ ಅನುಭವಿಸುತ್ತಿರುವ ಸಮುದಾಯ ಯಾವುದು ?

6) ತಾಲೂಕಿನ ಒಟ್ಟು ದಲಿತ ಸಮುದಾಯದ ಹಳ್ಳಿಗಳಲ್ಲಿ 17 ಶಾಸಕರು ನಮ್ಮನ್ನು ಹಾಳಿದ್ದರೂ ಶೇಕಡ 97 ರಷ್ಟು ಹಳ್ಳಿಗಳಲ್ಲೂ ಸ್ಮಶಾನವಿಲ್ಲದೆ ದಲಿತರ ಬದುಕು ಚಿಂತಾಜನಕವಾಗಿದೆ ಇದಕ್ಕೆ ಕಾರಣ ಏನು?

7) ಪೊಲೀಸ್ ಠಾಣೆಯ ಮುಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಅಡ್ಡಗಾಲು ಹಾಕಿ, ಡಾ.ಬಿ.ಆರ್.ಅಂಬೇಡ್ಕರ್ ರವರ ನಿರ್ಮಾಣಕ್ಕೆ 20 ವರ್ಷ ತೆಗೆದುಕೊಂಡ ಶಾಸಕರು ಯಾವ ಸಮುದಾಯಕ್ಕೆ ಸೇರಿದವರು? ಪ್ರತಿಮೆ ನಿರ್ಮಾಣವಾದರೂ ಉದ್ಘಾಟನೆಗೊಳ್ಳದಂತೆ ನೋಡಿಕೊಂಡ ಶಾಸಕರು ಯಾವ ಯಾವ ಸಮುದಾಯಕ್ಕೆ ಸೇರಿದವರು ?

8) ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಪುರಸಭೆ ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿಯ ಸಂದರ್ಭಗಳನ್ನು ಬಿಟ್ಟರೆ ಉಳಿದೆಲ್ಲಾ ಸಂದರ್ಭಗಳಲ್ಲಿ ಅಧ್ಯಕ್ಷ ಸ್ಥಾನದ ಗದ್ದುಗೆಯನ್ನು ಏರಿ ರಾರಾಜಿಸಿದ / ರಾರಾಜಿಸುತ್ತಿರುವ ಸಮುದಾಯ ಯಾವುದು?

9) ತಾಲೂಕಿನ ರಾಜಕೀಯ ಚರಿತ್ರೆಯಲ್ಲಿ ದಲಿತ ಸಮುದಾಯದ ಒಬ್ಬ ಎಂಎಲ್ಸಿ ಯನ್ನು ಕಂಡಿದ್ದೇವೆಯೇ? ಎಂಎಲ್ಸಿ ಕಥೆ ಇರಲಿ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಇರಲಿ ಸದಸ್ಯ ಸ್ಥಾನವನ್ನಾದರೂ ಕಂಡಿದ್ದೇವೆ?

10) ತಾಲೂಕಿನಲ್ಲಿ ನಮ್ಮನ್ನು ಆಳಿ ಹೋದ ಮತ್ತು ಆಳುತ್ತಿರುವ ಶಾಸಕರುಗಳು ಕೊನೆ ಪಕ್ಷ ಒಬ್ಬ ಪಿ.ಎ (ಆಪ್ತ ಸಹಾಯಕ) ಸ್ಥಾನವನ್ನಾದರೂ ಒಬ್ಬ ದಲಿತನಿಗೆ ಕೊಟ್ಟಿದ್ದಾರೆಯೇ ? ಇಂತಹ ಹೀನಾಯ ದರಿದ್ರ ಸ್ಥಿತಿಯಲ್ಲಿರುವ ದಲಿತ ರಾಜಕಾರಣಕ್ಕೆ ಯಾರು ಹೊಣೆ?
ನಿಜಕ್ಕೂ ಪ್ರಭುತ್ವವೇ ಉತ್ತರಿಸಬೇಕಾಗಿದೆ.

“ರಾಮನಗರ ಜಿಲ್ಲಾ ದಲಿತ ರಾಜಕಾರಣ ಅನಾಥಶವ”

  • ಸುರೇಶ ಗೌತಮ್, ಸಾಮಾಜಿಕ ಹೋರಾಟಗಾರರು

Leave a Reply