ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿ; ಜನತೆಯ ಜೀವದ ಜೊತೆ ಚೆಲ್ಲಾಟ ಆಡದಿರಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
ಕೊರೋನ ಸಾಂಕ್ರಾಮಿಕ ಸೋಂಕು ದೇಶವ್ಯಾಪಿ ತೀವ್ರಗತಿಯಲ್ಲಿ ಹರಡುತ್ತಿದ್ದು ಸೋಂಕಿನ ಎರಡನೇ ಅಲೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಸೋಂಕಿನ ಮೊದಲ ಅಲೆ ಉಂಟುಮಾಡಿದ ಸಂಕಷ್ಟದಿಂದ ಜನತೆ ಇನ್ನೂ ಹೊರಬಂದಿಲ್ಲ. ನಿನ್ನೆ ಒಂದೇ ದಿನ ಇಡೀ ದೇಶದಲ್ಲಿ 2.75 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಮ್ಮ ರಾಜ್ಯದಲ್ಲಿಯೇ ಒಂದೇ ದಿನದಲ್ಲಿ 20 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು ಸೋಂಕಿಗೆ ಒಳಗಾಗಿದ್ದಾರೆ ಎಂದಿದ್ದಾರೆ.
ನಿನ್ನೆ ಲ್ಯಾನ್ಸೆಟ್ ಕೋವಿಡ್-19 ಕಮಿಷನ್ ಹತ್ತು ಮಂದಿಗಿಂತ ಹೆಚ್ಚು ಜನರು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೋಂಕು ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದಿದೆ. ಈ ಎಲ್ಲಾ ಗೊಂದಲ ಮತ್ತು ಸಂಕಷ್ಟಗಳ ನಡುವೆ ಕರ್ನಾಟಕದ ರಾಜ್ಯ ಚುನಾವಣಾ ಆಯೋಗ ಏಪ್ರಿಲ್ 27ರಂದು ಹತ್ತು ಸ್ಥಳೀಯ ಸಂಸ್ಥೆಗಳಾದ ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರ ಮತ್ತು ಹಾಸನ ಜಿಲ್ಲೆಯ ಬೇಲೂರು ಪುರಸಭೆ, ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಕೊಡಗು ಜಿಲ್ಲೆಯ ಮಡಿಕೇರಿ, ಬೀದರ್ ನಗರಸಭೆ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು, ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯಿತಿಗೆ ಉಪಚುನಾವಣೆ ನಡೆಸಲು ತೀರ್ಮಾನಿಸಿದೆ ಎಂದಿದ್ದಾರೆ.
ಮತ ಪ್ರಚಾರದಿಂದ ಹಿಡಿದು ಮತದಾನದವರೆಗಿನ ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರು ಗುಂಪು ಸೇರುವುದರಿಂದ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳಿವೆ. ಮತ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆ ಭೇಟಿ ಮಾಡುವುದರಿಂದ ಸೋಂಕು ವೇಗವಾಗಿ ಹರಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಮ್ಮ ರಾಜ್ಯದ ಆಸ್ಪತ್ರೆಗಳು ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್ ಗಳು, ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್, ಇಲ್ಲದೆ ಜನರು ಚಿಕಿತ್ಸೆ ಪಡೆಯದೆ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಸೋಂಕು ವ್ಯಾಪಕವಾಗಿ ಹರಡಿ ಸೋಂಕಿತರ ಸಂಖ್ಯೆ ಹೆಚ್ಚಿದರೆ ಅದನ್ನು ಎದುರಿಸಲು ನಮ್ಮ ರಾಜ್ಯ ಸರಕಾರಕ್ಕೆ ಅಸಾಧ್ಯವಾಗಲಿದೆ ಎಂದಿದ್ದಾರೆ.
ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೋಂಕನ್ನು ಇನ್ನಷ್ಟೂ ವೇಗವಾಗಿ ಹರಡಲು ನಾವೇ ಮಾರ್ಗ ಮಾಡಿಕೊಟ್ಟ ಹಾಗೆ ಆಗುತ್ತದೆ. ಚುನಾವಣೆ ನಡೆಸಿ ಜನತೆಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಈಗಾಗಲೇ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡದೇ ಇರುವುದನ್ನು ಖಂಡಿಸಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪಕ್ಷ ಆಗ್ರಹಿಸಿತ್ತು. ಈಗ ಸೋಂಕು ಹರಡುವಿಕೆಯನ್ನು ತಡೆಗಟ್ಟಿ ಜನರ ಜೀವವನ್ನು ಉಳಿಸಲು ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರಕಾರ ಚುನಾವಣೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.



