ಸಿಎಂ ಹುದ್ದೆಯನ್ನು ದಲಿತ ಸಮುದಾಯಕ್ಕೆ ನೀಡಬೇಕು

5 months ago

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರ ನಿವಾಸ ಚಟುವಟಿಕೆಯ ತಾಣವಾಗಿ ಪರಿಣಮಿಸಿತು.

ಮುನಿಯಪ್ಪ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ಸೇರಿದ ಶಾಸಕರು ಮತ್ತು ಹಿರಿಯ ಮುಖಂಡರು ಸಭೆ ನಡೆಸಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರ ರಚನೆಯಾಗಿದ್ದರೆ ಈಗ ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಹಲವಾರು ಜನಪರ ಯೋಜನೆಗಳು ಜಾರಿಯಾಗಿದ್ದು, ಜನತೆ ಕಾಂಗ್ರೆಸ್ ಗೆ ಹತ್ತಿರವಾಗಿದ್ದಾರೆ. ಇಂತಹ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದು ಸರಿಯಲ್ಲ. ಇದರಿಂದ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಹೈಕಮಾಂಡ್ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಲೇಬೇಕು ಎಂದು ಬಯಸಿದರೆ ಈ ಹುದ್ದೆಯನ್ನು ದಲಿತ ಸಮುದಾಯಕ್ಕೆ ನೀಡಬೇಕು. ಸಮುದಾಯದ ಪ್ರಭಾವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ ಅಥವಾ ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ವರಿಷ್ಠರಿಗೆ ಮನವಿ ಸಲ್ಲಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ದೊಡ್ಡಮಟ್ಟದ ಚರ್ಚೆ ನಡೆಯುತ್ತಿದ್ದು, ಆಡಳಿ ಯಂತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ತಕ್ಷಣವೇ ಹೈಕಮಾಂಡ್ ಮಧ್ಯ ಪ್ರವೇಶಿಸಿ ಈ ಗೊಂದಲಗಳಿಗೆ ಪೂರ್ಣ ವಿರಾಮ ಹಾಕಬೇಕು ಎಂದು ಅಭಿಪ್ರಾಯಪಟ್ಟರು.

ಹೈಕಮಾಂಡ್ ಈ ವಿಚಾರವಾಗಿ ಇಲ್ಲಿಯವರೆಗೆ ಏನನ್ನೂ ಹೇಳದ ಪರಿಣಾಮ ಕಾಂಗ್ರೆಸ್ ಶಾಸಕರು ಬಣಗಳಾಗಿ ವಿಭಜನೆಯಾಗಿದ್ದಾರೆ. ಇದು ಪಕ್ಷ ಸಂಘಟನೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ ಉಭಯ ನಾಯಕರು, ಸದ್ಯದಲ್ಲಿಯೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಗೊಂದಲ ಬಗೆಹರಿಸಲು ಮನವಿ ಮಾಡುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ತಲುಪಿವೆ. ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಿಂದ ನಡೆಯುತ್ತಿವೆ. ಆದರೆ ಇವೆಲ್ಲವೂ ಗೊಂದಲದ ಪರಿಣಾಮವಾಗಿ ಜನ ಗಮನಕ್ಕೆ ಬರುತ್ತಿಲ್ಲ. ಗೊಂದಲಗಳು ಪಕ್ಷ ಮತ್ತು ಸರ್ಕಾರದ ವಿರುದ್ಧ ಅಭಿಪ್ರಾಯ ಮೂಡುವಂತೆ ಆಗಿದೆ ಎಂದರು.

ಈ ವೇಳೆ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ವೆಂಕಟರಮಣಯ್ಯ, ರಾಜೀವ್ ಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply