ಬೆಂಗಳೂರು: ಬಡತನ ನಿರ್ಮೂಲನೆಯಾಗಬೇಕು ಮತ್ತು ಬಡವರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿ ಬರಬೇಕು ಎಂಬುದು ನಮ್ಮ ಉದ್ದೇಶ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರೇನಹಳ್ಳಿ ವಾರ್ಡ್ ನಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ಸಂಕೀರ್ಣ ಬಳಿಯ ಜಿ.ಕೆ.ಡಬ್ಯೂ ಲೇಔಟ್ ಬಸ್ ನಿಲ್ದಾಣ ಆವರಣದಲ್ಲಿ ಕೊರೋನ ಸಂಕಷ್ಟದಿಂದ ಆರ್ಥಿಕವಾಗಿ ಹಿಂದುಳಿದ ಬಡವರು, ಕೂಲಿಕಾರ್ಮಿಕರು ಮತ್ತು ಮಹಿಳೆಯರು ಮತ್ತು ವಿಕಲಚೇತನರಿಗೆ ದಿನಸಿ ಸಾಮಾಗ್ರಿಗಳ ಆಹಾರ ಕಿಟ್ ಗಳನ್ನು ವಿ.ಸೋಮಣ್ಣ ವಿತರಿಸಿ ಮಾತನಾಡಿದರು.
ಕೊರೋನ ಎಂಬ ಸಾಂಕ್ರಮಿಕ ರೋಗದಿಂದ ಕಳೆದ ಒಂದೂವರೆ ವರ್ಷದಿಂದ ಜನರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಜನಸಂಖ್ಯೆ ಇದೆ. ಇಂತಹ ಸಂಕಷ್ಟ ಸಮಯದಲ್ಲಿ ನೆರವು ನೀಡಬೇಕು ಎಂದು ಸತತವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೋನಾ ಮಸೂರಿ ಅಕ್ಕಿ, ಬೇಳೆ ಮತ್ತು ಎಣ್ಣೆ, ಗೋಧಿಹಿಟ್ಟು, ಸಕ್ಕರೆ ಸಾಂಬಾರ್ ಪದಾರ್ಥ ಇನ್ನಿತರೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಬಡತನ ನಿರ್ಮೂಲನೆ ಮತ್ತು ಬಡವರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿ ಬರಬೇಕು ಎಂಬ ಉದ್ದೇಶದಿಂದ ವಸತಿ ಇಲಾಖೆಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಮನೆಗಳನ್ನು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ನೀಡಲಾಗುತ್ತಿದೆ ಎಂದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್ ನಲ್ಲಿ 200 ಬೆಡ್ ಹೈಟೆಕ್ ಆಸ್ಪತ್ರೆ ಮತ್ತು ನಾಯಂಡಹಳ್ಳಿ ವಾರ್ಡ್ ನ ಪಂತರಪಾಳ್ಯದಲ್ಲಿ 200 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗಿದೆ ಎಂದರು.
ಸಾರ್ವಜನಿಕರಿಗೆ ಕೊವಿಡ್ ಚಿಕಿತ್ಸೆಗಾಗಿ ಯುನಾನಿ ಮಹಾವಿದ್ಯಾಲಯದಲ್ಲಿ 200 ಬೆಡ್, 50 ಆಕ್ಸಿಜನ್ ಸಾಂದ್ರಕ ಆಳವಡಿಸಲಾಗಿದೆ ಹಾಗೂ ಮಾರುತಿಮಂದಿರ ವಾರ್ಡ್ ನಲ್ಲಿ ಅತಿ ಶೀಘ್ರದಲ್ಲಿ 70 ಬೆಡ್ ಕೊವಿಡ್ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.
ಕೊವಿಡ್ ಮೂರನೇ ಅಲೆ ಎಂದು ಹೆದರಬೇಡಿ, ಧೈರ್ಯದಿಂದ ಎದುರಿಸಿ. ಕೊವಿಡ್ ಗುಣಲಕ್ಷಣಗಳು ಇದ್ದರೆ ಕೂಡಲೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಬಡವರು ಸಂಕಷ್ಟಗಳ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿರವರು 80 ಕೋಟಿ ಬಿ.ಪಿ.ಎಲ್. ಕಾರ್ಡ್ ದಾರರಿಗೆ ನವಂಬರ್ ವರೆಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮಿಕವರ್ಗ, ಚಲನಚಿತ್ರ, ಕಿರುತೆರೆ ಕಲಾವಿದರು, ಅರ್ಚಕರಿಗೆ 2000 ಅನುದಾನ ನೀಡಿದ್ದಾರೆ ಎಂದರು.
ಸಾರ್ವಜನಿಕರು ಕೊವಿಡ್ ಬರದಂತೆ ನಿಮ್ಮ ಮತ್ತು ನಿಮ್ಮ ಕುಟುಂಬ ರಕ್ಷಣೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಸರ್ ಮತ್ತು ಸೋಪಿನಿಂದ ಕೈಯನ್ನು ಸ್ವಚ್ಚಗೊಳಿಸಿ. ಕೊವಿಡ್-19ಲಸಿಕೆ ಹಾಕಿಸಿಕೊಳ್ಳಿ, ಕೊರೋನ ಮುಕ್ತ ಭಾರತಕ್ಕೆ ಕೈಜೋಡಿಸಿ ಎಂದು ಕರೆನೀಡಿದರು.
ರಾಜ್ಯ ಬಿ.ಜೆ.ಪಿ.ಯುವ ಮೋರ್ಚಾ ಮುಖಂಡ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಬಿ.ಜೆ.ಪಿ. ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ವಾಗೇಶ್, ದಾಸೇಗೌಡ, ರಾಮಪ್ಪ, ಶಂಕುತಲ ಡೊಡ್ಡ ಲಕ್ಕಪ್ಪ, ಗಂಗಭೈರಯ್ಯ ಮೊದಲಾದವರು ಭಾಗವಹಿಸಿದ್ದರು. 1975ರ ತುರ್ತುಪರಿಸ್ಥಿತಿಯಲ್ಲಿ ಹೋರಾಟದಲ್ಲಿ ಸೆರವಾಸ ಅನುಭವಿಸಿದ್ದ ಹನುಮಂತಯ್ಯ ದಂಪತಿಗೆ ಸೋಮಣ್ಣ ಸನ್ಮಾನಿಸಿದರು .




