ಹೊಸ ಶಿಕ್ಷಣ ನೀತಿ: ಭಾಷಾ ವಿಷಯ ಕುರಿತು ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪತ್ರ

5 years ago

ಬೆಂಗಳೂರು: ಹೊಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ಆಗುತ್ತಿರುವ ಅಪಾಯ ಕುರಿತು ನಾಡಿನ ಹೆಸರಾಂತ ಸಾಹಿತಿಗಳು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಹೊಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ಆಗುತ್ತಿರುವ ಅಪಾಯ ವಿಷಯದ ಬಗ್ಗೆ ನಿಮ್ಮ ಗಮನ ಸೆಳೆದು ಕನ್ನಡವನ್ನೂ ಒಳಗೊಂಡಂತೆ ಭಾಷಾ ಪಠ್ಯವಿಷಯಗಳಿಗೆ ಸೂಕ್ತ ಸ್ಥಾನ ಕಲ್ಪಿಸಬೇಕೆಂದು ಒತ್ತಾ ಪೂರ್ವಕ ವಿನಂತಿ ಮಾಡಲು ಈ ಪತ್ರವನ್ನು ಬರೆಯುತ್ತಿದ್ದೇವೆ ಎಂದು ಲೇಖಕರು ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿಯನುಸಾರ ಪದವಿ ತರಗತಿಗಳಿಗೆ ಪಠ್ಯಕ್ರಮದ ಸ್ಥೂಲ ಸ್ವರೂಪವನ್ನು ಸೂಚಿಸಲು ನೇಮಿಸಲಾಗಿದ್ದ ಸಮಿತಿಯು ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಸೀಮಿತಗೊಳಿಸಿದೆ. ಇದರ ಬಗ್ಗೆ ವಿರೋಧ ಬಂದಾಗ ತಾವು “ಕನ್ನಡ ಪಠ್ಯ ಕಡಿತ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದೀರಿ. ಸಂತೋಷ ಆದರೆ ನಿಮ್ಮ ಸ್ಪಷ್ಟನೆಯು ಇನ್ನೂ ಅಧಿಕೃತ ಆದೇಶವಾಗಿ ಹೊರಬಂದಿಲ್ಲ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಳಕಂಡ ಒತ್ತಾಯ ಪೂರ್ವಕ ಏನಂತಿಯನ್ನು ಮಾಡುತ್ತೇವೆ:

  1. ಮೂರು ವರ್ಷದ ಪದವಿ ಕೋರ್ಸ್ ಇದ್ದಾಗ ಕನ್ನಡಾದಿ ಭಾಷಾ ವಿಷಯಗಳನ್ನು ಎರಡು ವರ್ಷ ಬೋಧಿಸಲಾಗುತ್ತಿತ್ತು. ಈಗ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳನ್ನು ಮೂರು ವರ್ಷಗಳ ಅವಧಿಗೆ ಪಠ್ಯವಾಗಿಸಬೇಕು.
  2. ಭಾಷಾ ವಿಷಯಗಳ ಪಠ್ಯಗಳೆಂದರೆ ಕೇವಲ ಕೌಶಲ್ಯ ಮತ್ತು ಸಂವಹನೆಯ ಸಾಧನಗಳಲ್ಲ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಪಠ್ಯ ವಿಷಯಗಳೆಂದು ಭಾವಿಸಬೇಕು. ಅದಕ್ಕನುಗುಣವಾಗಿ ಯಾವುದೇ ವಿಶೇಷಾಧ್ಯಯನ ಮಾಡುವ ವ್ಯಾಸಂಗಿಗಳಿಗೆ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಅರಿವು ಮೂಡಿಸುವ ದೃಷ್ಟಿಯಿಂದ ಪಠ್ಯಕ್ರಮ ರೂಪಿಸಬೇಕು. ಮಾನವೀಯ ಮೌಲ್ಯಗಳ ವೃದ್ಧಿಗೆ ಬಾಷಾ ಪಠ್ಯಗಳು ಪೂರಕವಾಗಿರಬೇಕು. ಹೊಸ ನೀತಿಯ ಹೆಸರಿನಲ್ಲಿ ಭಾಷಾ ಕೌಶಲ್ಯಕ್ಕೆ ಸೀಮಿತ ಮಾಡಬಾರದು. ಈ ನಿಟ್ಟಿನಲ್ಲಿ ತಾವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಪೂರ್ವಕವಾಗಿ ವಿನಂತಿಸುತ್ತೇವೆ ಎಂದಿದ್ದಾರೆ.

ಪತ್ರಕ್ಕೆ ಬರಗೂರು ರಾಮಚಂದ್ರಪ್ಪ, ಬಿ.ಎ.ವಿವೇಕ ರೈ, ಎಚ್.ಎಸ್.ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ,  ಎಚ್.ಎಸ್.ರಾಘವೇಂದ್ರರಾವ್, ಬಸವರಾಜ ಕಲ್ಗುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಾನು ಮುಷ್ತಾಕ್, ಜಿ.ರಾಮಕೃಷ್ಣ, ಕೆ.ಮರಳಸಿದ್ದಪ್ಪ, ಎಲ್.ಹನುಮಂತಯ್ಯ, ಬಸವರಾಜ ಸಬರದ, ಬಂಜಗೆರೆ ಜಯಪ್ರಕಾಶ್‌, ಸರಜು ಕಾಟ್ಕರ್, ಶರೀಫಾ.ಕೆ, ಸುಕನ್ಯಾ ಮಾರುತಿ ಮೊದಲಾದವರು ಸಹಿ ಹಾಕಿದ್ದಾರೆ.

Leave a Reply