ಬೆಂಗಳೂರು: ಚುನಾವಣೆಗೆ ಮುನ್ನ 123 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಉತ್ಸಾಹದಲ್ಲಿ ಹೇಳುತ್ತಿದ್ದ ಜೆಡಿಎಸ್ ಪಕ್ಷವು 4 ಸೀಟುಗಳಿಗಾಗಿ ಬಿಜೆಪಿಯ ಬಾಗಿಲಲ್ಲಿ ನಿಂತಿರುವುದು ಅವರ ಬದ್ಧತೆ ಎಂತದ್ದು ಎಂಬುದಕ್ಕೆ ಸ್ಪಷ್ಟವಾದ ಸಾಕ್ಷಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬಿಜೆಪಿ – ಜೆಡಿಎಸ್ ಮೈತ್ರಿ ಚರ್ಚೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳಿಗೆ ಮಹತ್ವ ನೀಡದೇ ಕೇವಲ ಅಧಿಕಾರದ ಹಿಂದೆ ಹೊರಟಿರುವ ಜೆಡಿಎಸ್ ಪಕ್ಷದ ಈ ನಡೆಯಿಂದ ಅವರಿಗೆ ಇರುವ ಅಲ್ಪ ಸ್ವಲ್ಪ ಜನ ಬೆಂಬಲವೂ ಕಳೆದು ಹೋಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ರೈತ ವಿರೋಧಿಯಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಜಾರಿಯ ಸಂದರ್ಭದಲ್ಲಿ ಸದನದ ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕವಾಡಿದ್ದ ಜೆಡಿಎಸ್ ಪಕ್ಷಕ್ಕೆ ಯಾವ ಸಿದ್ಧಾಂತವೂ ಇಲ್ಲ ಎಂಬುದು ತಿಳಿದಿರುವ ವಿಷಯ ಎಂದು ಹೇಳಿದ್ದಾರೆ.
ನಾನು ಗಮನಿಸಿದಂತೆ ಸಾರ್ವಜನಿಕ ಜೀವನದಲ್ಲಿ ಸೈದ್ಧಾಂತಿಕ ಬದ್ಧತೆಯಿಲ್ಲದ ರಾಜಕೀಯ ಪಕ್ಷಗಳಿಗೆ ಅವಸಾನವೇ ಗತಿ. ಅದು ಜೆಡಿಎಸ್ ಆದರೂ ಅಷ್ಟೇ ಇನ್ಯಾರಾದಾರೂ ಅಷ್ಟೇ ಎಂದಿದ್ದಾರೆ.




