ನೇಹಾ ಹತ್ಯೆ ತನಿಖೆಯಲ್ಲಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ: ಆರ್.ಅಶೋಕ

3 years ago

ಹುಬ್ಬಳ್ಳಿ: ಲವ್ ಜಿಹಾದ್ನಿಂದ ನೇಹಾ ಕೊಲೆಗೀಡಾಗಿದ್ದು, ಅವರಿಗೆ ನ್ಯಾಯ ಕೊಡಿಸುತ್ತೇನೆ. ಈ ಕುರಿತು ಸದನದಲ್ಲೂ ಮಾತನಾಡುತ್ತೇನೆ. ಬಸ್ ಟಿಕೆಟ್ನಿಂದ ಹಾರ ಹಾಕುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೆಣ್ಣುಮಕ್ಕಳನ್ನು ಕೊಂದು ಹಾರ ಹಾಕುವ ಬಗ್ಗೆ ಉತ್ತರ ನೀಡಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಮನೆಗೆ ಆರ್.ಅಶೋಕ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಮಾತನಾಡಿದ ಅಶೋಕ, ನೇಹಾ ಹತ್ಯೆ ತನಿಖೆಯಲ್ಲಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳದೆ ಜೈಲಿಗೆ ಕಳುಹಿಸಲಾಗಿದೆ. ತಪ್ಪಿಸಿಕೊಳ್ಳಲು ಪೊಲೀಸರೇ ಅವಕಾಶ ಮಾಡಿದ್ದಾರೆ ಎಂದರು.

ಲವ್ ಜಿಹಾದ್ ಮುಚ್ಚಿಹಾಕಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ, ಸಿಐಡಿಗೆ ಕೊಟ್ಟು ವಿಳಂಬ ಮಾಡಲಾಗಿದೆ. ಗಲ್ಲು ಶಿಕ್ಷೆ ವಿಧಿಸಲು ಸೂಕ್ತ ಸಾಕ್ಷಿಗಳು ಬೇಕು. ಅದಕ್ಕಾಗಿ ಸರಿಯಾದ ದಾಖಲೆಗಳನ್ನು ಸಂಗ್ರಹಿಸಬೇಕು. ಆರೋಪಿ ಯಾರ ಜೊತೆ ಏನು ಮಾತಾಡಿದ್ದಾನೆ ಎಂಬುದನ್ನು ತನಿಖೆ ಮಾಡಿ ಘಟನೆಗೆ ಕಾರಣರಾದವರನ್ನೂ ಬಂಧಿಸಬೇಕು. ಇವ್ಯಾವುದನ್ನೂ ಮಾಡದ ಪೊಲೀಸರು ಕೆಲವು ತಿಂಗಳು ಕಳೆದ ನಂತರ ಪ್ರಕರಣ ಮುಚ್ಚಿಹಾಕುವ ಅನುಮಾನವಿದೆ ಎಂದರು.

ಆದರೆ, ವಾಸ್ತವವಾಗಿ ಈ ಕೊಲೆಗೂ ಧರ್ಮಕ್ಕೂ ಸಂಬಂಧವಿಲ್ಲ. ಲೋಕಸಭೆ ಚುನಾವಣೆ ಹೊತ್ತಿನಲ್ಲಿ ನಡೆದ ಈ ಹತ್ಯೆ ಪ್ರಕರಣಕ್ಕೆ ಆರಂಭದಲ್ಲಿ ವಿದ್ಯುನ್ಮಾನ ಮತ್ತು ಸಂಘ ಪರಿವಾರ ಬೆಂಬಲಿತ ಮಾಧ್ಯಮಗಳು ಹಾಗೂ ಬಿಜೆಪಿ ಧಾರ್ಮಿಕ ಲೇಪನ ನೀಡಲು ಯತ್ನಿಸಿದ್ದವು. ಆದರೆ, ಸ್ವತಃ ಸಿಎಂ ಸಿದ್ದರಾಮಯ್ಯ, ನೇಹಾ ಕುಟುಂದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ, ಪ್ರತಿಕ್ರಿಯಿಸಿದ್ದ ನೇಹಾ ತಂದೆ ತಾವು ತಪ್ಪು ತಿಳುವಳಿಕೆಯಿಂದ ಈ ಹಿಂದೆ ಮಾತನಾಡಿರುವುದಾಗಿ ಘೋಷಿಸಿದ್ದರು. ಆದರೆ, ಇದೀಗ ಮತ್ತೆ ಆರ್.ಅಶೋಕ ಈ ಪ್ರಕರಣಕ್ಕೆ ಧಾರ್ಮಿಕ ಲೇಪನ ನೀಡಲು ಯತ್ನಿಸಿದ್ದಾರೆ.

Leave a Reply