8 ಕೋಟಿ ಮೌಲ್ಯದ ತಟ್ಟೆ,ಲೋಟ ಮತ್ತು ಸೀರೆ ವಶ

3 years ago

ಹಾವೇರಿ: ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 8 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಂಕರ್‌ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್‌ ಭಾವಚಿತ್ರ ಇರುವ ಸೀರೆ ಬಾಕ್ಸ್,‌ ತಟ್ಟೆ– ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ಕಾಲೇಜುಗಳವರೆಗೆ ಹಂಚಲು ತಂದಿರುವ ಸ್ಕೂಲ್‌ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

6000ಕ್ಕೂ ಹೆಚ್ಚು ಸೀರೆ, 9000 ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್ ಗಳು ಸಾವಿರಾರು ತಟ್ಟೆಲೋಟಗಳು ಸುಮಾರು 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು ವಶಕ್ಕೆ ಪಡೆಯಲಾಗಿದ್ದು ಅವುಗಳ ಮೌಲ್ಯ 8ಕೋಟಿಗೂ ಹೆಚ್ಚು ಎನ್ನಲಾಗಿದೆ.

ಸುಮಾರು ಏಳು ಗಂಟೆಗೂ ಹೆಚ್ಚು ಕಾಲ ದಾಳಿ ನಡೆಸಿ ಅಧಿಕಾರಿಗಳು ತಪಾಸಣೆ ನಡೆಸಿ ಜಪ್ತಿ ಮಾಡಿರುವ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ‌ ವಶಕ್ಕೆ ನೀಡಿದ್ದಾರೆ. ಈ ಎಲ್ಲ ವಸ್ತುಗಳ ಜಿಎಸ್ ಟಿ ಬಿಲ್ ಕೇಳಿದ್ದು,ಬಿಲ್ ಕೊಡಲು ಆರ್ ಶಂಕರ್ ಕಾಲಾವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್ ಟಿ ಬಿಲ್ ಇಲ್ಲದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ.

ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದ ಕಾರಣ  ಕಂದಾಯ ಇಲಾಖೆ ಅಧಿಕಾರಿಗಳು ಸಹ ದಾಳಿ ಮಾಡಿದ್ದು ಎಲ್ಲ ದಾಖಲೆಗಳನ್ನು ಕೊರ್ಟ್ ಮುಂದೆ ಹಾಜರುಪಡಿಸಿ ಒಪ್ಪಿಗೆ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗುವುದು  ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾಹಿತಿ ನೀಡಿದ್ದಾರೆ.

ಹಾವೇರಿ ಉಪವಿಭಾಗಾಧಿಕಾರಿ ಅವರಿಗೆ ದಾಖಲೆ ಪತ್ರ, ಬಿಲ್‌ ಮತ್ತು ಸ್ಟಾಕ್‌ ಚೆಕ್‌ ತಪಾಸಣೆ ನಡೆಸಲು ವಾಣಿಜ್ಯ ತೆರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply