ಗದಗ: ರೋಣ ತಹಶೀಲ್ದಾರ ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಭೇಟಿ ನೀಡಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಂದಾಯ ವಿಷಯಗಳಾದ ಪಹಣಿ, ರುದ್ರಭೂಮಿ, ಕಡತ ವಿಲೇವಾರಿ, ಪಿಂಚಣಿ, ಮಾಶಾಸನ, ಪ್ರಮಾಣ ಪತ್ರಗಳ ವಿತರಣೆ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಲವಾರು ಕುಂದುಕೊರತೆಗಳಿಗೆ ತಾಲೂಕು ಆಡಳಿತ ಸಕಾಲದಲ್ಲಿ ಸ್ಪಂದಿಸುವ ಮೂಲಕ ನೊಂದ ಸಾರ್ವಜನಿಕರಿಗೆ ಸರ್ಕಾರದ ಸೌವಲತ್ತುಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಕಾರ್ಯ ಪ್ರವೃತ್ತವಾಗಬೇಕು ಎಂದರು.
ಜನಸಾಮಾನ್ಯರ ಸೇವೆಗಾಗಿ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ಸದಾ ಸಿದ್ಧರಾಗಿರಬೇಕು. ಸರ್ಕಾರದ ಉನ್ನತ ಮಟ್ಟದಿಂದ ಕೆಲಹಂತದವರೆಗೂ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ ಯಶಸ್ವಿಗೊಳಿಸುವಲ್ಲಿ ಕಂದಾಯ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದರು.
ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆ ನೌಕರರು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಹೊಣೆಗಾರಿಕೆಯೊಂದಿಗೆ ಫಲಾನುಭವಿಗಳ ಆಯ್ಕೆ ಹಾಗೂ ಸವಲತ್ತುಗಳ ವಿತರಣೆಗೆ ಸವಾಲಾಗಿ ಸ್ವೀಕರಿಸಬೇಕು ಎಂದರು.
ತಹಶೀಲ್ದಾರ್ ಜಿ.ಬಿ.ಜಕ್ಕನಗೌಡ್ರ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ನಾವೆಲ್ಲರೂ ಸರ್ವಸನ್ನಧರಾಗಿ ಕಾರ್ಯನಿರ್ವಹಿಸೋಣ. ಕರ್ತವ್ಯದಲ್ಲಿ ಶಿಸ್ತು ಪ್ರಾಮಾಣಿಕತೆ, ನಿಸ್ವಾರ್ಥ ಭಾವನೆಯಿಂದ ಜನಸೇವೆಗಾಗಿ ಬದ್ಧರಾಗಿ ಕಾರ್ಯನಿರ್ವಹಿಸೋಣ. ಕಂದಾಯ ಇಲಾಖೆಯು ತಾಲೂಕಿನ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಂದಾಳತ್ವ ವಹಿಸುವ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಿಗರು, ಕಂದಾಯ ಇಲಾಖೆಯ ವಿವಿಧ ಹಂತದ ಸಿಬ್ಬಂದಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದರು.



