ಬೆಂಗಳೂರಿನಲ್ಲಿ ಅಕ್ರಮ ಮದರಸಾ, ಶಾಲೆ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್

1 day ago

ನಕಲಿ ದಾಖಲೆ ನೀಡಿ ₹5 ಲಕ್ಷ ಅನುದಾನ ಪಡೆದ ಆರೋಪ – ಸರ್ಕಾರಕ್ಕೆ ನೋಟಿಸ್!

ಬೆಂಗಳೂರು: ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿಯ ಅಡಿಯಲ್ಲಿ ನಗರದ ಥಣಿಸಂದ್ರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನಲಾದ ‘ಜಾಮಿಯಾ ಮೊಹಮ್ಮದೀಯ ಮನ್ಸೂರಾ ರೆಸಿಡೆನ್ಸಿಯಲ್ ಸ್ಕೂಲ್ (ಮದರಸಾ)’ ಹಾಗೂ ‘ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್’ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಂಬಂಧ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಪಾದರಾಯನಪುರದ ನಿವಾಸಿ ಚಾಂದ್ ಪಾಷಾ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್.ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ಗೃಹ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ ಜಾಮಿಯಾ ಎಜುಕೇಶನ್ ಸೊಸೈಟಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ನ್ಯಾಯಾಲಯದಲ್ಲಿ ಹಿರಿಯ ವಕೀಲರು ಮಂಡಿಸಿದ ಗಂಭೀರ ವಾದಗಳೇನು?: ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ಅವರು ಸಂಸ್ಥೆಯ ಅಕ್ರಮಗಳ ಕುರಿತು ನ್ಯಾಯಪೀಠದ ಗಮನಕ್ಕೆ ತಂದ ಪ್ರಮುಖ ಅಂಶಗಳು ಹೀಗಿವೆ:

ನೋಂದಣಿ ದಾಖಲೆಗಳೇ ಇಲ್ಲ: ಮಹಾರಾಷ್ಟ್ರ ಸೊಸೈಟಿಗಳ ನೋಂದಣಿ ಕಾಯಿದೆ-1979ರ ಅಡಿಯಲ್ಲಿ ನೋಂದಣಿಯಾಗಿರುವುದಾಗಿ ಸಂಸ್ಥೆ ಹೇಳಿಕೊಳ್ಳುತ್ತಿದೆ. ಆದರೆ, ಅಂತಹ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ.

ಮಾನ್ಯತೆ ರದ್ದಾದರೂ ಶಾಲೆ ಚಾಲನೆ: ನೋಂದಣಿಯಿಲ್ಲದೆ ಥಣಿಸಂದ್ರದಲ್ಲಿ ಮದರಸಾ ಮತ್ತು ಶಾಲೆಯನ್ನು ನಡೆಸಲಾಗುತ್ತಿದ್ದು, 2025ರ ಮೇ 30ರಂದೇ ಶಿಕ್ಷಣ ಇಲಾಖೆ ಇದರ ಮಾನ್ಯತೆಯನ್ನು ರದ್ದುಪಡಿಸಿದೆ. ಆದರೂ ಅಕ್ರಮವಾಗಿ ಶಾಲೆ ನಡೆಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ನಕಲಿ ದಾಖಲೆ ನೀಡಿ ಅನುದಾನ ಲೂಟಿ: ಈ ಸಂಸ್ಥೆಯಲ್ಲಿ ಉತ್ತರ ಭಾರತದ ವಲಸೆ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸರ್ಕಾರದಿಂದ ₹5 ಲಕ್ಷ ಅನುದಾನವನ್ನೂ ಪಡೆದುಕೊಳ್ಳಲಾಗಿದೆ ಎಂದು ವಕೀಲರು ಗಂಭೀರ ಆರೋಪ ಮಾಡಿದ್ದಾರೆ.

ಅರ್ಜಿದಾರರು ಹೈಕೋರ್ಟ್ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳೇನು?: ಅಕ್ರಮವಾಗಿ ನಡೆಸಲಾಗುತ್ತಿರುವ ಮದರಸಾ ಮತ್ತು ಶಾಲೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು. ಈ ಕುರಿತು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು.

ಅಲ್ ಜಾಮಿಯಾ ಮೊಹಮ್ಮದಿಯಾ ಎಜುಕೇಷನಲ್ ಸೊಸೈಟಿ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸಬೇಕು ಹಾಗೂ ಇಡೀ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು.

ನಕಲಿ ದಾಖಲೆ ನೀಡಿ ಪಡೆದಿರುವ ₹5 ಲಕ್ಷ ಅನುದಾನವನ್ನು ಸಂಸ್ಥೆಯಿಂದ ವಾಪಸ್ ಪಡೆಯಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Leave a Reply