ಬೆಂಗಳೂರು: ಸುಖ, ಶಾಂತಿ, ನೆಮ್ಮದ್ದಿ ಜೀವನಕ್ಕೆ ಯೋಗ ಮುಖ್ಯ. ಇದೇ ಹಿನ್ನೆಲೆಯಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತಾಡಿದ ಅವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿರವರು ರಾಷ್ಟ್ರದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡಿದರು. ನಮ್ಮ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಇನ್ನು ಎರಡು ತಿಂಗಳಲ್ಲಿ ಲೋಕರ್ಪಣೆ ಮಾಡಲಾಗುವುದು. ಪಂತರಪಾಳ್ಯ ಮತ್ತು ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 60 ಹಾಸಿಗೆ ಸಾಮಥ್ಯವುಳ್ಳ ಕಿಡ್ನಿ ಡಯಾಲಿಸಿಸ್ ಆಸ್ಪತ್ರೆಗಳು ಅತಿ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದರು.
ಇಂದು ಮಕ್ಕಳು ಮತ್ತು ಯುವ ಜನಾಂಗ ಆನಾರೋಗ್ಯ ಪೀಡಿತರಾಗುತ್ತಿರುವುದು ಶೋಚನೀಯ ಸಂಗತಿ. ರೋಗ ಮುಕ್ತವಾಗಲು, ಆರೋಗ್ಯವಂತ ಜೀವನ ಸಾಗಿಸಲು ಪ್ರತಿ ದಿನ ಎಲ್ಲರು ಯೋಗ ಮಾಡಿ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ, ವಿಶ್ವನಾಥಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ದಾಸೇಗೌಡ, ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ರಾಜಪ್ಪ ಪಾಲ್ಗೊಂಡಿದ್ದರು. ನಟಿ ಪ್ರಿಯಾಂಕ ಉಪೇಂದ್ರ ಮತ್ತು ಅಂತರಾಷ್ಟ್ರೀಯ ಯೋಗಪಟು ಭಾಗೀರಥಿ ಅವರಿಗೆ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಸಾವಿರಾರು ಯೋಗಪಟುಗಳು ಸೂರ್ಯ ನಮಸ್ಕಾರ, ಪ್ರಾಣಯಾಮ ವಿವಿಧ ಆಸನಗಳ ಪ್ರದರ್ಶನ ಮಾಡಿದರು.



