ಬಿಜೆಪಿಯನ್ನು ಕಿತ್ತು ಬಿಸಾಕ್ಬೇಕು ಎಂಬುದು ಜನರ ಮನಸ್ಸಿನಲ್ಲಿದೆ: ಸಿದ್ದರಾಮಯ್ಯ

4 years ago

ಮಂಡ್ಯ: ಜಾತ್ಯತೀತ ತತ್ವದಲ್ಲಿ ನಂಬಿಕೆಯಿರುವ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಡ್ಯದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಮಾತಾಡಿದ ಅವರು, ಬಿಜೆಪಿ ಪಕ್ಷ ಚುನಾವಣೆ ಸೋಲಿಗೆ ಹೆದರಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಮಾಡುತ್ತಿಲ್ಲ. ಮಂಡ್ಯದಲ್ಲಿ ಸುಮಾರು 4,025 ಜನ ಪರಿಷತ್ ಮತದಾರರಿದ್ದಾರೆ. ಇಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಇಲ್ಲಿ ಸ್ಪರ್ಧೆ ಇರೋದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಎಂದರು.

ಈಗ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು, ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಸಾಮಾನ್ಯ ಜನ, ಚುನಾಯಿತ ಪ್ರತಿನಿಧಿಗಳು ಸೇರಿ ಎಲ್ಲರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ, ಅಭಿವೃದ್ಧಿ ಶೂನ್ಯ ಆಡಳಿತದಿಂದ ರೋಸಿ ಹೋಗಿದ್ದಾರೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ಸರ್ಕಾರಗಳು ವಿಫಲವಾಗಿವೆ. ಜೆಡಿಎಸ್ ಇಡೀ ರಾಜ್ಯದ ಎಲ್ಲಾ ಕಡೆ ಇರುವ ಪಕ್ಷವಲ್ಲ, ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಾ ಇದೆ, ಕೇಂದ್ರದಲ್ಲಿ ಬಂದು 7 ವರ್ಷ ಆಗಿದೆ, ಇವೆರಡೂ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣಕ್ಕೆ ನೀಡಿರುವ ಕೊಡುಗೆ ಶೂನ್ಯ. ಪಂಚಾಯತ್ ರಾಜ್ ವ್ಯವಸ್ಥೆಗೆ ಎರಡು ಬಾರಿಯೂ ಶಕ್ತಿ ತುಂಬುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ರಾಮ ಮನೋಹರ ಲೋಹಿಯಾ ಅವರು ದೇಶದ ಅಧಿಕಾರ ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಹಂಚಿಕೆಯಾಗಬೇಕು ಎಂದು ಹೇಳಿದ್ದರು. ಅವರ ಈ ಅಧಿಕಾರ ವಿಕೇಂದ್ರೀಕರಣ ತತ್ವದಲ್ಲಿ ಕಾಂಗ್ರೆಸ್ ಪಕ್ಷ ನಂಬಿಕೆ ಇಟ್ಟಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಇತರೆ ಪಕ್ಷಗಳ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ಇದರಿಂದ ಗ್ರಾಮ ಪಂಚಾಯತಿಗಳಿಗೆ ಅನುದಾನ ಹರಿದು ಬರಲು ಆರಂಭವಾಯಿತು. ಕಳೆದ ಕೆಲವು ತಿಂಗಳುಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದವರ ಕೂಲಿ ನೀಡಿಲ್ಲ. ಕೊರೊನಾ ರೋಗ ಉಲ್ಬಣಗೊಂಡ ಸಂದರ್ಭದಲ್ಲಿ ನರೇಗಾ ಯೋಜನೆ ಇಲ್ಲದೆ ಹೋಗಿದ್ದರೆ ಜನ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತಿತ್ತು ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ವಾರ್ಷಿಕ 3 ಲಕ್ಷ ಮನೆಗಳಂತೆ ಐದು ವರ್ಷಕ್ಕೆ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದೆ. ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ಬಡವರಿಗೆ ನಿವೇಶನ, ಮನೆ ಕೊಡಲು ಆಗಲ್ಲ ಎಂದಮೇಲೆ ಇಂಥವರಿಗೆ ಯಾಕೆ ಮತ ನೀಡಬೇಕು. ನಮ್ಮ ಸರ್ಕಾರ ಮಂಜೂರು ಮಾಡಿದ್ದ ಕೆಲವು ಮನೆಗಳಿಗೆ ಎರಡನೇ ಕಂತಿನ, ಮೂರನೇ ಕಂತಿನ ಹಣ ನೀಡದೆ ಲಾಕ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಬೇಕು ಎಂದು ಮನವಿ ಮಾಡುತ್ತೇನೆ. ಗ್ರಾಮ ಸಭೆಗಳಲ್ಲಿ ಮನೆ ಮಂಜೂರಾತಿ ಕೆಲಸವೇ ನಿಂತಿದೆ. ಸದನದಲ್ಲಿ ಈ ಬಗ್ಗೆ ವಸತಿ ಸಚಿವ ಸೋಮಣ್ಣನವರನ್ನು ಕೇಳಿದರೆ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಾರೆ ಎಂದು ಆರೋಪಿಸಿದರು.

ಎರಡು ಬಾರಿ ಪ್ರವಾಹ ಬಂದಿದೆ, ಈ ಬಾರಿ ಅಕಾಲಿಕ ಮಳೆ ಸುರಿದು ರೈತರು ಕಂಗಾಲಾಗಿದ್ದಾರೆ. ರಾಗಿ, ಜೋಳ, ಭತ್ತ, ಅಡಿಕೆ, ತೆಂಗು, ತೊಗರಿ, ಹೂವು, ತರಕಾರಿಗಳು ಮುಂತಾದ ಬೆಳೆಗಳು ಹಾನಿಗೀಡಾಗಿವೆ. ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿಲ್ಲ, ಪರಿಹಾರದ ಹಣವನ್ನು ನೀಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಿದ ಪರಿಹಾರವನ್ನೇ ಇನ್ನೂ ನೀಡಿಲ್ಲ. ಈ ಬಗ್ಗೆ ಸದನದಲ್ಲಿ ಎರಡೆರಡು ಬಾರಿ ಪ್ರಸ್ತಾಪ ಮಾಡಿದ್ದೇನೆ, ಮತ್ತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ಸರ್ಕಾರ ರೈತ, ಬಡವರ ವಿರೋಧಿ ಸರ್ಕಾರ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಕೊರೊನಾ ಎರಡನೇ ಅಲೆ ಬರುವ ಮೊದಲು ಸರ್ಕಾರ ಅಗತ್ಯ ತಯಾರಿ ಮಾಡಿಕೊಳ್ಳದೆ ರಾಜ್ಯದಲ್ಲಿ ಕನಿಷ್ಠ 4 ಲಕ್ಷ ಜನ ಸಾವಿಗೀಡಾಗಿದ್ದಾರೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ ಒಂದೇ ದಿನ 36 ಜನ ಸಕಾಲದಲ್ಲಿ ಆಮ್ಲಜನಕ ಸಿಗದೆ ಸತ್ತುಹೋದರು. ಆರೋಗ್ಯ ಸಚಿವ ಸುಧಾಕರ್ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸತ್ತವರು ಕೇವಲ ಮೂರು ಜನ ಎಂದು ಸುಳ್ಳು ಹೇಳಿದರು, ನಾನು ಹೋಗಿ ವೈದ್ಯರ ಜೊತೆ ಸಭೆ ನಡೆಸಿದಾಗ ಸತ್ತವರು 36 ಎಂದು ಒಪ್ಪಿಕೊಂಡರು. ಸತ್ತವರ ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ. ದೇಶದಲ್ಲಿ ಕೊರೊನಾದಿಂದ ಕಡಿಮೆ ಎಂದರೂ 50 ಲಕ್ಷ ಜನ ಸತ್ತಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಿ ಎಂದರೆ ಅದನ್ನೂ ಮಾಡಿಲ್ಲ. ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಪರಿಹಾರ ಕೊಡ್ತೀವಿ ಎಂದರು, ಕೊಟ್ಟರೋ ಬಿಟ್ಟರೋ ಯಾರಿಗೂ ಗೊತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಏಳು ಕೆ.ಜಿ ಅಕ್ಕಿಯನ್ನು ಒಂದೇ ವರ್ಷ ಕೊಟ್ಟಿದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳುತ್ತಾರೆ. ಬಿಜೆಪಿಯ ಕೆಲವರು ಉಚಿತ ಅಕ್ಕಿ ನೀಡುವುದು ಕೇಂದ್ರ ಸರ್ಕಾರದ ಕಾರ್ಯಕ್ರಮ ಎನ್ನುತ್ತಾರೆ. ಹಾಗಾದರೆ ಉತ್ತರ ಪ್ರದೇಶ, ರಾಜಸ್ಥಾನ ಮುಂತಾದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಕಾರ್ಯಕ್ರಮ ಯಾಕಿಲ್ಲ? ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರದ ಇಂದಿರಾ ಕ್ಯಾಂಟೀನ್, ಪಶುಭಾಗ್ಯ, ಕೃಷಿ ಭಾಗ್ಯ ಮುಂತಾದ ಯೋಜನೆಯನ್ನು ನಿಲ್ಲಿಸಿದ್ದಾರೆ. ಜನ ಈ ಸರ್ಕಾರದ ಬಗೆಗೆ ರೋಸಿ ಹೋಗಿದ್ದಾರೆ. ಇದರಿಂದ ಎಲ್ಲಾ ಕಡೆ ಕಾಂಗ್ರೆಸ್ ಪರವಾದ ಅಲೆ ಆರಂಭವಾಗಿದೆ. ಬಹಳಷ್ಟು ಜನರು ಬೇರೆ ಪಕ್ಷಗಳನ್ನು ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ, ಮುಂದೆಯೂ ಸೇರುವವರಿದ್ದಾರೆ. ಇದರರ್ಥ ರಾಜಕೀಯ ಧ್ರುವೀಕರಣ ಆರಂಭವಾಗಿದೆ ಎಂದರು.

ನರೇಂದ್ರ ಮೋದಿ ಅವರು ದೇಶದಲ್ಲಿ ಅಚ್ಚೇ ದಿನ್ ಬರುತ್ತೆ ಎಂದರೂ, ನಾ ಖಾವೂಂಗಾ – ನಾ ಖಾನೇದೂಂಗ ಎಂದರು,  ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ 40% ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಿದ್ರಾ? ಭ್ರಷ್ಟರಿಗೆ ಶಿಕ್ಷೆ ಕೊಟ್ರಾ? ಬರೀ ಬಾಯಿಮಾತಿಗೆ ನಾ ಖಾವೂಂಗಾ, ನಾ ಖಾನೇದೂಂಗ ಅಂದರೆ ಏನರ್ಥ? ಎಂದು ಖಾರವಾಗಿ ಪ್ರಶ್ನಿಸಿದರು.

ಮೋದಿ ಅವರ ಅಚ್ಚೇ ದಿನ್ ಎಲ್ಲಿದೆ? ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ಡೀಸೆಲ್ ಬೆಲೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 45 – 47 ರೂಪಾಯಿ ಇತ್ತು, ಅದರ ಮೇಲೆ ತೆರಿಗೆ 3 ರೂಪಾಯಿ 47 ಪೈಸೆ ಇತ್ತು, ಮೋದಿ ಅವರು ಬಂದಮೇಲೆ ಡೀಸೆಲ್ ಬೆಲೆ 100 ರೂಪಾಯಿ ಆಗಿದೆ, ಡೀಸೆಲ್ ಮೇಲಿನ ತೆರಿಗೆ 31 ರೂಪಾಯಿ 80 ಪೈಸೆಗೆ ಏರಿದೆ. ಪೆಟ್ರೋಲ್ ಬೆಲೆ ಯು.ಪಿ.ಎ ಅವಧಿಯಲ್ಲಿ 65 – 67 ಇತ್ತು, ಪೆಟ್ರೋಲ್ ಮೇಲಿನ ತೆರಿಗೆ 9 ರೂಪಾಯಿ 20 ಪೈಸೆ ಇತ್ತು, ಇವತ್ತು ಪೆಟ್ರೋಲ್ ಬೆಲೆ 100 ರೂಪಾಯಿ ಇದೆ, ಪೆಟ್ರೋಲ್ ಮೇಲಿನ ತೆರಿಗೆ 32 ರೂಪಾಯಿ 90 ಪೈಸೆ ಆಗಿದೆ. ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಹೇಳುವಂತೆ ಹಿಂದಿನ ಸರ್ಕಾರ ಸಾಲ ಮಾಡಿದ್ದಕ್ಕೆ ಬೆಲೆ ಹೆಚ್ಚಾಗಿದೆ ಎಂಬುದು ಶುದ್ಧ ಸುಳ್ಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಅವುಗಳ ಮೇಲಿನ ತೆರಿಗೆ ಹೆಚ್ಚಳ ಕಾರಣ ಎಂದರು.

ಹಿಂದಿನ ಸರ್ಕಾರಗಳು ರೂ. 1 ಲಕ್ಷದ 40 ಸಾವಿರ ಕೋಟಿ ತೈಲ ಬಾಂಡ್ ಗಳ ಮೇಲೆ ಸಾಲ ಮಾಡಿದ್ದವು. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ 23 ಲಕ್ಷ ಕೋಟಿ ಆದಾಯ ಬಂದಿದೆ. ಅದರಲ್ಲಿ ಸಾಲದ ಮೊತ್ತ ಕಳೆದರೂ 21 ಲಕ್ಷದ 60 ಸಾವಿರ ಕೋಟಿ ಹಣ ಉಳಿಯುತ್ತೆ. 416 ರೂಪಾಯಿ ಇದ್ದ ಗ್ಯಾಸ್ ಬೆಲೆ ಈಗ ಸಾವಿರ ದಾಟಿದೆ, ಹೀಗೆ ಅಡುಗೆ ಎಣ್ಣೆ, ರಸಗೊಬ್ಬರ, ಸಿಮೆಂಟ್, ಕಬ್ಬಿಣದ ಬೆಲೆ ಗಗನಕ್ಕೇರಿದೆ. ಎಲ್ಲಿದೆ ಅಚ್ಚೇ ದಿನ್? ಬಿಜೆಪಿಗೆ ಮತ ನೀಡಿದರೆ ಒಳ್ಳೆ ದಿನ ಬರುತ್ತೆ ಎಂದುಕೊಂಡಿದ್ದ ಸಾಮಾನ್ಯ ಜನರೀಗ ರೋಸಿ ಹೋಗಿದ್ದಾರೆ. ಬಿಜೆಪಿಯನ್ನು ಕಿತ್ತು ಬಿಸಾಕ್ಬೇಕು ಎಂಬುದು ಜನರ ಮನಸ್ಸಿನಲ್ಲಿದೆ ಎಂದರು.

ಈ ಬಾರಿ ಮಂಡ್ಯದಲ್ಲಿ ದಿನೇಶ್ ಗೂಳಿಗೌಡ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಹೇಳುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆ ಸಿಂಗಲ್ ಮತ ಹಾಕಬೇಕು ಎಂದು ಇಲ್ಲಿನ ಮತದಾರರಲ್ಲಿ ಮನವಿ ಮಾಡುತ್ತೇನೆ. ಅಧಿಕಾರ ವಿಕೇಂದ್ರೀಕರಣದ ಪರವಾಗಿರುವ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕು ಎಂದು ಮನವಿ ಮಾಡಿದರು.

Leave a Reply