ಬೆಂಗಳೂರು: ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಡ್ಯದಲ್ಲಿ ಡಿಸೆಂಬರ್೨೦೨೩ರಲ್ಲಿ ಹಮ್ಮಿಕೊಳ್ಳಲಾಗುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಲಾಂಛನ ಹಾಗೂ ಧ್ಯೇಯವಾಕ್ಯ ರಚಿಸುವ ಮೂಲಕ ಸಾರ್ವಜನಿಕರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತಾಗಿಸುವ ನಿಟ್ಟಿಲ್ಲಿ ಸಾರ್ವಜನಿಕರು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಹಾವೇರಿಯಲ್ಲಿ ನಡೆದ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಸಾರ್ವಜನಿಕರ ಸಹಕಾರ ಹಾಗೂ ಸಹಯೋಗದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ಆದರೂ ಕೆಲವು ಅಚಾತುರ್ಯಗಳು ನಡೆದಿರುವುದು ಕಂಡು ಬಂದಿದೆ. ಪ್ರಸ್ತುತ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೆ ಅಚಾತುರ್ಯಕ್ಕೆ ಅವಕಾಶ ನೀಡಬಾರದು ಎನ್ನುವ ಆಶಯದೊಂದಿಗೆ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದೆ. ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನವು ಸಮಸ್ತ ಕನ್ನಡಿಗರ ಅಕ್ಷರ ಪರಂಪರೆಯ ಹಬ್ಬವಾಗಬೇಕು. ಪ್ರತಿಯೊಬ್ಬ ಕನ್ನಡಿಗನೂ ಈ ನುಡಿ ಜಾತ್ರೆಯ ಭಾಗವಾಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾಗಿದೆ ಎಂದಿದ್ದಾರೆ.
ಮಂಡ್ಯದಲ್ಲಿ ನಡೆಯುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು, ಕನ್ನಡಿಗರೇ ಮುಂದೆ ನಿಂತು ನಡೆಸಿಕೊಡಬೇಕಾದ ಸಮ್ಮೇಳನ ಇದಾಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯವಾಗಿದೆ. ಅದಕ್ಕಾಗಿ ಮಂಡ್ಯದಲ್ಲಿ ನಡೆಯುವ ನುಡಿಜಾತ್ರೆಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ ಬಿಂಬಿಸುವುದರೊಂದಿಗೆ ಮಂಡ್ಯದ ಜಿಲ್ಲೆಯ ಮಹತ್ವವನ್ನು ಸಾರುವ ಲಾಂಛನ ಮತ್ತು ಅರ್ಥಪೂರ್ಣ ಧ್ಯೇಯವಾಕ್ಯವನ್ನು ಸಿದ್ಧಪಡಿಸವ ಅವಕಾಶವನ್ನು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ನಡೆಯು ೮೭ನೆಯ ಅಕ್ಷರ ಜಾತ್ರೆಯನ್ನು ಕೇವಲ ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಸರಕಾರ ಮಾತ್ರ ನಡೆಸುವ ಬದಲು, ಇದು ಪ್ರತಿಯೊಬ್ಬ ಕನ್ನಡಿಗರು, ಕನ್ನಡ ನಾಡಿನ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಆಚರಿಸುವ ಕನ್ನಡದ ಹಬ್ಬವಾಗಬೇಕಿದೆ. ಹೀಗಾಗಿ ಕನ್ನಡದ ಮನಸ್ಸನ್ನು ಹೊಂದಿರುವ ಎಲ್ಲರನ್ನು ಈ ಕನ್ನಡದ ಹಬ್ಬಕ್ಕಾಗಿ ತೊಡಗಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಅದರ ಮೊದಲ ಹಂತವಾಗಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅರ್ಥಪೂರ್ಣವಾದ ಮತ್ತು ಕಲಾತ್ಮಕವಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ರಚಿಸಿ ಮೇ ೩೧ ರೊಳಗಾಗಿ ʻಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು ೫೬೦೦೧೮ʼ* ಇವರಿಗೆ ಕಳಿಸಲು ಕೋರಲಾಗಿದೆ.
ನಾಡು, ನುಡಿ, ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಾಧನೆಗಳು, ನೆಲ, ಮೂಲಗಳನ್ನು ಸಾರುವ ಮತ್ತು ಇತಿಹಾಸವನ್ನು ಬಿಂಬಿಸಬಲ್ಲ ಅರ್ಥಪೂರ್ಣವಾಗಿ ಕಲಾವಂತಿಕೆಯಿಂದ ಸಿದ್ಧಪಡಿಸಲಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಮಂಡ್ಯದಲ್ಲಿ ನಡೆಯುವ ೮೭ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧಿಕೃತ ಲಾಂಛನ ಹಾಗೂ ಧ್ಯೇಯವಾಕ್ಯವಾಗಿ ಬಳಸಲಾಗುವುದು. ಜೊತೆಗೆ ಆಯ್ಕೆ ಮಾಡಲಾದ ಲಾಂಛನ ಹಾಗೂ ಧ್ಯೇಯವಾಕ್ಯ ರಚಿಸಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನದಲ್ಲಿ ಗೌರವ ಸಲ್ಲಿಸಲಾಗುವುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




