ಕನ್ನಡ ಸಾಹಿತ್ಯ ಪರಿಷತ್ತಿನ ಅವಧಿ ಮುಗಿದ ಅಧ್ಯಕ್ಷ ಮಾನ್ಯ ಮನು ಬಳಿಗಾರ ಅವರೇ,
ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ನಾವು ಬರೆದ ಬಹಿರಂಗ ಪತ್ರಕ್ಕೆ ಉತ್ತರಿಸುತ್ತ ನೀವು ನಮಗೆ “ನಿಯಮಾವಳಿಗಳೇ ಗೊತ್ತಿಲ್ಲ, ಹತಾಶರಾಗಿ ಈ ರೀತಿ ಆರೋಪ ಮಾಡುತ್ತಿದ್ದೀರಿ” ಎಂದು ಹೇಳಿದ್ದೀರಿ. ಪರಿಷತ್ತಿನೊಡನೆ ನಾವೆಲ್ಲ ನಿಮಗಿಂತ ಬಹಳ ಮೊದಲೇ ಸಂಪರ್ಕ ಹೊಂದಿದವರು. ನಮಗೆ ಪರಿಷತ್ತು ಅಂದರೇನು ಎಂದು ನಿಮಗಿಂತ ಚೆನ್ನಾಗಿ ಅರಿವಿದೆ. ಇದು ಸಾಹಿತ್ಯಲೋಕ. ಅಧಿಕಾರಶಾಹಿ ಪ್ರಪಂಚ ಅಲ್ಲ. ಪುಸ್ತಕ ದ್ವೇಷಿಗಳಾದ ನಿಮ್ಮಂಥವರು ಕಸಾಪ ಅಧ್ಯಕ್ಷರಾದದ್ದೇ ಒಂದು ವಿಪರ್ಯಾಸದ ಸಂಗತಿ. ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದಾಗ ಅನೇಕ ಹಿರಿಯರು ನಿಮ್ಮ ಬಳಿ ತಮ್ಮ ಪುಸ್ತಕಗಳನ್ನು ಕೊಡಲು ಬಂದಾಗ ನೀವು ಅವರೊಡನೆ ಅವಮಾನಕರ ರೀತಿಯಲ್ಲಿ ನಡೆದುಕೊಂಡು ಪುಸ್ತಕ ದೂರ ತಳ್ಳಿದ ಹಲವು ಪ್ರಕರಣಗಳು ನಮಗೆ ಗೊತ್ತು.
ಅಕ್ರಮವಾಗಿ ಗಳಿಸಿದ ಹಣದಿಂದ ಇಂದು ಯಾರು ಏನು ಬೇಕಾದರೂ ಆಗಬಹುದು. ಅದು ಬೇರೆ ಪ್ರಶ್ನೆ. ಆದರೆ ಕಸಾಪದಂತಹ ಸಂಸ್ಥೆ ಅನೇಕ ದಿಗ್ಗಜ ಸಾಹಿತಿಗಳಿಂದ ಅಲಂಕರಿಸಲ್ಪಟ್ಟು ಗೌರವ ಪಡೆದ ಸಂಸ್ಥೆ. ಆ ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಯೋಗ್ಯತೆ ಬೇಕಾಗುತ್ತದೆ. ರಾಜಕಾರಣಿಗಳ ಹಾಗೆ ಚುನಾವಣೆಯಲ್ಲಿ ಮತ ಪಡೆದಿದ್ದೇನೆಂಬುದೇ ನಿಜವಾದ ಅರ್ಹತೆ ಅಲ್ಲ. ನೀವು ನಮಗೆ ನಿಯಮಾವಳಿಯ ಪಾಠ ಹೇಳುವ ಅಗತ್ಯವೇನಿಲ್ಲ. ಆ ಯೋಗ್ಯತೆಯೂ ನಿಮ್ಮದಲ್ಲ. ನಾವೆಲ್ಲ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘ ಕಾಲದಿಂದ ಇದ್ದವರು. ಕಸಾಪ ನಿಮ್ಮೊಬ್ಬರ ಸಂಸ್ಥೆ ಅಲ್ಲ. ಅಲ್ಲದೇ ಸದ್ಯ ನೀವು ” ಕೇರ್ ಟೇಕರ್” ಮಾತ್ರ. ಅಧಿಕೃತ “ಪೊಲಿಸಿ ಡಿಸಿಶನ್ಸ್” ತೆಗೆದುಕೊಳ್ಳುವ ಯಾವ ಅಧಿಕಾರವೂ ನಿಮಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಮತ್ತು ಎಲ್ಲರೂ ಒಪ್ಪಿಕೊಂಡ ನಿಯಮ.
ಇನ್ನು ನಾವು ಹತಾಶೆಯಿಂದ ಆರೋಪ ಮಾಡುತ್ತಿದ್ದೇವೆಂಬ ನಿಮ್ಮ ಹೇಳಿಕೆಯೂ ಬಾಲಿಶವಾದದ್ದು. ಹತಾಶೆಯಾಗಲು ನಿಮ್ಮಿಂದ ಏನಾದರೊಂದು ಅಪೇಕ್ಷೆಯನ್ನು ಇಟ್ಟುಕೊಂಡಿರಬೇಕಲ್ಲವೆ? ನಿಮ್ಮಿಂದ ನಮಗೆ ಆಗಬೇಕಾದ್ದು ಏನೂ ಇಲ್ಲವಲ್ಲ. ಅವನ್ನು ಅಪೇಕ್ಷಿಸುವಂಥವರು, ಹಿಂಬಾಲಕರಾಗಿ ಎಲ್ಲದಕ್ಕೂ ತಲೆ ಅಲ್ಲಾಡಿಸುವವರು ಇಂದು ನಿಮ್ಮೊಂದಿಗಿದ್ದೇ ಇದ್ದಾರೆ. ಐದು ವರ್ಷ ನಿಮ್ಮದೇ ಆದ ಒಂದು ಗುಂಪು ಕಟ್ಟಿಕೊಂಡು ನಿಮಗೆ ಬೇಕಾದಂತೆ ಎರಡು ವರ್ಷ ಅಧಿಕಾರ ಜಾಸ್ತಿ ಮಾಡಿಕೊಂಡಿದ್ದು ಸಾಹಿತ್ಯ ಕ್ಷೇತ್ರದ ಹಿತಕ್ಕಂತೂ ಅಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳುವದು ಕಷ್ಟವಲ್ಲ. ನಿಯಮಾವಳಿಗಳಿಗಿಂತ ಸಾರಸ್ವತ ಲೋಕದಲ್ಲಿ ಕೆಲವು ನೈತಿಕ ಕಟ್ಟುಪಾಡುಗಳು ಮುಖ್ಯ. ನೈತಿಕತೆಯ ಪ್ರಜ್ಞೆ ನಿಮ್ಮನ್ನು ಎಂದೂ ಕಾಡಿರಲಿಕ್ಕಿಲ್ಲ. ಆದರೆ ಸಾಹಿತ್ಯಲೋಕದಲ್ಲಿ ಬಹಳ ಕಾಲದಿಂದ ಇರುವ ನಮ್ಮಂಥವರಿಗೆ ಕಸಾಪ ಬಗ್ಗೆಯೂ ನೈಜ ಕಾಳಜಿಯಿರುವದರಿಂದ ಮತ್ತು ಅದರ ಘನತೆ ಗೌರವ ಹಾಳಾಗಬಾರದೆಂಬ ಎಚ್ಚರ ನಮಗಿರುವದರಿಂದ ನಾವು ಬಹಿರಂಗವಾಗಿ ಕೆಲ ವಿಚಾರ ಜನರ ಗಮನಕ್ಕೆ ತಂದದ್ದು. ನಿಮ್ಮ ಹತಾಶೆಯ ಉತ್ತರ ನಮಗೆ ಅನಿರೀಕ್ಷಿತವೇನಲ್ಲ. ನಮ್ಮ ನಿಲುವಿಗೆ ನಾವು ಬದ್ಧರಿದ್ದೇವೆ.
– ಜಿನದತ್ತ ದೇಸಾಯಿ/ ಡಾ. ಬಸವರಾಜ ಜಗಜಂಪಿ/ ಧರಣೇಂದ್ರ ಕುರಕುರಿ/ ಡಾ. ಹನುಮಾಕ್ಷಿ ಗೋಗಿ/ ಎಲ್. ಎಸ್. ಶಾಸ್ತ್ರಿ,/ ಪಿ. ಬಿ. ಸ್ವಾಮಿ/ ಅಶೋಕ ಮಳಗಲಿ/ ದೀಪಿಕಾ ಚಾಟೆ/ ಗುಂಡೇನಟ್ಟಿ ಮಧುಕರ/ ಆರ್. ಬಿ. ಕಟ್ಟಿ/ಎಂ. ಎ. ಪಾಟೀಲ, / ಡಾ. ಸಿ. ಕೆ. ಜೋರಾಪೂರ/ ಸುನಂದಾ ಜೆ. ಪಿ. ವಿಜಯಕುಮಾರ/ಸುನಂದಾ ಮುಳೆ, / ಮೋಹನ ಗುಂಡ್ಲೂರ/ ಆನಂದ ಪುರಾಣಿಕ




