ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ 9ನೇ ಅಧಿವೇಶನ ಆರಂಭವಾಗಿದ್ದು, ‘ಒಂದು ದೇಶ ಒಂದು ಚುನಾವಣೆ’ ಚರ್ಚೆಗೆ ಸಭಾಪತಿ ವಿಶ್ವೇಶ‍್ವರ ಹೆಗಡೆ ಕಾಗೇರಿ ಅವಕಾಶ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿದರು.
ಆದರೆ, ಈ ವೇಳೆ ಮಧ್ಯಪ್ರವೇಶಿಸಿ ಮಾತಾಡಿದ ಸ್ಪೀಕರ್ ಕಾಗೇರಿ, ಚರ್ಚೆಗೆ ಒಪ್ಪಿಕೊಂಡು ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಒಂದು ದೇಶ ಒಂದು ಚುನಾವಣೆ ಯೋಚನೆಯೇ ಅವಾಸ್ತವಿಕ ಎಂದು ವಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಿಸಿದರು. ಕಾಂಗ್ರೆಸ್‌ನ ಘೋಷಣೆಯ ನಡುವೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ಆರಂಭಿಸಿದರು.
ಈ ವೇಳೆ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಕಾಂಗ್ರೆಸ್ ಧರಣಿ ಮುಂದುವರಿಸಿತು. ಇದರಿಂದಾಗಿ ಸಭಾಧ್ಯಕ್ಷರು 15 ನಿಮಿಷ ಕಾಲ ಕಲಾಪವನ್ನು ಮುಂದೂಡಿದರು.
ಇದಕ್ಕೂ ಮುನ್ನ ಅಧಿವೇಶನದ ಪ್ರಯುಕ್ತ ನಿನ್ನೆ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಪುಟ ಸಭೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸಭೆ ನಡೆಸಿ, ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್. ಎಸ್.ಆರ್.ಪಾಟೀಲ್, ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಕಾಂಗ್ರೆಸ್ ಗೆ ಬಾಹ್ಯ ಬೆಂಬಲ ನೀಡಿರುವ ಶರತ್ ಬಚ್ಚೇಗೌಡ ಸೇರಿದಂತೆ ಇನ್ನಿತರ ನಾಯಕರು ಹಾಜರಿದ್ದರು.




