ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಮತ್ತೊಂದು ಪ್ರಕರಣ ನಿಂತಿದೆ. 2010ರಲ್ಲಿ ಅವರ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಬೆಂಗಳೂರು ನಗರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಮಠದ ಭಕ್ತ ಪಿ.ಎಸ್.ಪ್ರಕಾಶ್ ಎಂಬುವವರು ನೀಡಿರುವ ದೂರಿನ ಆಧಾರದಡಿಯಲ್ಲಿ ಕೆಂಗೇರಿ ಪೊಲೀಸರು ಮುರುಘಾ ಶ್ರೀಗಳು ಮತ್ತು ಆನಂದ್ ಕುಮಾರ್ ಎಂಬುವವರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದರು.
ಮುರುಘಾಮಠ ದೇಶಾದ್ಯಂತ ಆಸ್ತಿಗಳನ್ನು ಹೊಂದಿದೆ. ಬೆಂಗಳೂರು ದಕ್ಷಿಣದ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ 7.18 ಎಕರೆ ಜಮೀನಿದೆ. ಮಠದ ಅಧ್ಯಕ್ಷರಾಗಿರುವ ಮುರುಘಾ ಶರಣರು ಈ ಜಮೀನನ್ನು ಆನಂದಕುಮಾರ್ ಅವರಿಗೆ ಮಾರಾಟ ಮಾಡಿದ್ದಾರೆ. ಪ್ರತಿ ಎಕರೆಗೆ ಮಾರುಕಟ್ಟೆ ಮೌಲ್ಯ 1 ಕೋಟಿ ರೂ. ಇದ್ದು, ಕಡಿಮೆ ದರಕ್ಕೆ ಮಾರಾಟ ಮಾಡುವ ಮೂಲಕ ಮಠಕ್ಕೆ 7 ಕೋಟಿ ರೂ.ಗೂ ಹೆಚ್ಚು ಮೊತ್ಯದ ನಷ್ಟ ಉಂಟು ಮಾಡಿ, ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ 4ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯ ಮುರುಘಾ ಶರಣರು ಮತ್ತು ಆನಂದ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ ಆದೇಶ ಹೊರಡಿಸಿದೆ.




