ಸಂಚಾರಿ ವಿಜಯ್ ಗೆ ಸಂತಾಪ ಸೂಚಿಸಿದ ಸಿಎಂ!
ವಿಜಯ್ ಸಾವಿಗೀಡಾಗಿದ್ದಾರೆ ಎಂದಿಲ್ಲ ಎಂದ ವೈದ್ಯರು
ಬೆಂಗಳೂರು: ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಳ್ಳುವ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಆರ್ಥಿಕ ಇಲಾಖೆ ಜೊತೆಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲವು ಕುಟುಂಬಗಳು ಬೀದಿಪಾಲಾಗಿವೆ. ಇದನ್ನು ಮನಗಂಡು ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಒಬ್ಬರಿಗೆ ಸೀಮಿತವಾಗಿ 1 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 250-300 ಕೋಟಿ ರೂ. ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಇರುವುದರಲ್ಲಿಯೇ ಉತ್ತಮವಾಗಿದೆ. ಅದಕ್ಕಾಗಿಯೇ ದೇಶದಲ್ಲೇ ನಾವು ವಯಸ್ಕರು ಮೃತರಾದಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡುವ ಯೋಜನೆ ತಂದಿದ್ದೇವೆ ಎಂದು ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎನ್ನುವ ಮೂಲಕ ವಿಪಕ್ಷಗಳು ಹೇಳಿದ್ದ ಆರ್ಥಿಕ ದುಃಸ್ಥಿತಿ ಆರೋಪವನ್ನು ನಿರಾಕರಿಸಿದರು.
ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಕಲಬೆರಕೆ ಮಾಡಿ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಗೆ ಆದೇಶಿಲಾಗಿದೆ. ಒಕ್ಕೂಟಕ್ಕೆ ಹೊಸ ಎಂಡಿ ನೇಮಿಸಲಾಗಿದೆ, ಐದು ಅಧಿಕಾರಿಗಳನ್ನು ಅಮಾನತು ಮಾಡಿ, ಒಕ್ಕೂಟದ ಮೇಲೆ ವಿಚಾರಣೆ ಆರಂಭಿಸಲಾಗುತ್ತದೆ. ತಪ್ಪು ಮಾಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ವಿಚಾರಣೆ ಸಿಐಡಿಯಿಂದ ನಡೆಸಲಾಗುತ್ತದೆ ಎಂದರು.
ಅಪಘಾತದಿಂದ ನಟ ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿದ್ದು, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಕೊಡಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದರು. ಆದರೆ, ವಿಜಯ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇನ್ನೂ ಹೃದಯ ಬಡಿತ ನಿಂತಿಲ್ಲ ಎಂದು ಹೇಳಿದ್ದಾರೆ.



