ಅಕ್ರಮ ಮದ್ಯ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ

1 year ago

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗೂಡಂಗಡಿ ಸೇರಿದಂತೆ ಕೆಲವು ಅನಧಿಕೃತ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ಶಾಸಕರು ಆಪಾದಿಸಿದರು.

ಅಕ್ರಮ ಮಧ್ಯ ಮಾರಾಟ ಕುರಿತಂತೆ ಬೈಲಹೊಂಗಲ ಕ್ಷೇತ್ರದ ಶಾಸಕ ಮಹಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಅಕ್ರಮ ಮಧ್ಯ ಮಾರಾಟದ ವಿರುದ್ಧ ನಮ್ಮ ಸರ್ಕಾರ ಸಮರ ಸಾರಿದೆ ಎಂದರು.

ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಹಾಂತೇಶ ಕೌಜಲಗಿ, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಅಕ್ರಮ ಮಧ್ಯ ಮಾರಾಟವಾಗುತ್ತಿದೆ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಆಡಳಿತ ಮತ್ತು ವಿಪಕ್ಷ ಸದಸ್ಯರು ಮಾಡಿದ ಹಲವು ಆರೋಪಗಳಿಗೆ ಉತ್ತರ ನೀಡಿದ ಆರ್ ಬಿ ತಿಮ್ಮಾಪುರ, ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವ್ಯಕ್ತಿಗಳು ಸ್ವಲಾಭಕ್ಕಾಗಿ ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಪ್ರಕರಣಗಳು ಗಮನಕ್ಕೆ ಬಂದಿವೆ. ನಿಯಂತ್ರಣ ಮಾಡುವ ಕೆಲಸವನ್ನು ಇಲಾಖೆಯಿಂದ ಮಾಡುತ್ತಿದ್ದೇವೆ. ಕಾನೂನು ಉಲ್ಲಂಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಕ್ರಮ ಮದ್ಯ ಮಾರಾಟದಿಂದ ವಿದ್ಯಾರ್ಥಿಗಳು ಮದ್ಯವ್ಯಸನಿಗಳಾಗುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆಯಿಂದ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ ಎಂದರು.

ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ಮಾರ್ಗಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ಗಸ್ತಿನ ಸಂದರ್ಭದಲ್ಲಿ ಮಹಿಳೆಯರು, ಮಹಿಳಾ ಸಂಘಗಳು ಸಾರ್ವಜನಿಕರಿಂದ ದೂರು ಸ್ವೀಕೃತವಾದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅಕ್ರಮ ಕಂಡುಬಂದಲ್ಲಿ ಅಬಕಾರಿ ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

ಬಿಜೆಪಿಯ ಬಿ.ಪಿ.ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಸೈಬರ್ ಕ್ರೈಂಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಕಳೆದ 1 ವರ್ಷದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದರು. 

ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗಾಂಜಾ, ಅಫೀಮು, ಮಟ್ಕಾ, ದಂಧೆ, ಕಳ್ಳಭಟ್ಟಿ, ಸರಗಳ್ಳತನ, ವಾಹನ ಕಳವು ಹಾಗೂ ಮಾದಕವಸ್ತುಗಳ ಮಾರಾಟದ ಮೇಲೆ ನಿರಂತರವಾಗಿ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಿಜೆಪಿಯ ಗುರುರಾಜ ಶೆಟ್ಟಿ ಘಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಕರಾವಳಿ ಪ್ರವಾಸೋದ್ಯಮ ಹೆಚ್ಚು ಜನಪ್ರಿಯವಾಗಿದ್ದು, ವಾರ್ಷಿಕ 8 ಕೋಟಿ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ ಎಂದರು.

ರಾಜ್ಯದ ಕರಾವಳಿ ಭಾಗವೂ ಒಳಗೊಂಡಂತೆ ಒಟ್ಟಾರೆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ನ್ನು ಜಾರಿಗೆ ತರಲಾಗಿದೆ ಎಂದರು.

ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ. ಪ್ರವಾಸೋದ್ಯಮ ನೀತಿಯಲ್ಲೇ ಕರಾವಳಿ ಭಾಗದಲ್ಲಿನ ಎಲ್ಲಾ ವರ್ಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಕರಾವಳಿ ಹಾಗೂ ಕಡಲತೀರ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದರು.

Leave a Reply