ಬರ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು: ಎಸ್.ಎಸ್.ಮಲ್ಲಿಕಾರ್ಜುನ್

2 years ago

#Officers #drought #SSMallikarjun #Davanagere

ಸಮರ್ಪಕ ಕುಡಿಯುವ ನೀರು, ಯೋಜನೆಗಳನ್ನು ಜನರಿಗೆ ತಲುಪಿಸಿ

ದಾವಣಗೆರೆ: ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಕೈ ಕೊಟ್ಟಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಲ್ಲಿದ್ದು, ಈ ಸಂಕಷ್ಟದ ವೇಳೆ ಸಮರ್ಪಕ ಕುಡಿಯುವ ನಿರು ಪೂರೈಕೆ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸೂಚನೆ ನೀಡಿದರು.

ಜಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬರ ಸ್ಥಿತಿ ಇರುವುದರಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದು. ಈ ಸಮಸ್ಯೆಯನ್ನು ಎದುರಿಸಲು ಎಲ್ಲ ಗ್ರಾಮ ಪಂಚಾಯಿತಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಲಭ್ಯರಿದ್ದು, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಸೂಚಿಸಿದರು.

ಜಗಳೂರು ತಾಲ್ಲೂಕು ಬರ ಪೀಡಿತ ಪ್ರದೇಶವಾಗಿದ್ದು, 48 ಗ್ರಾಮಗಳು ಪ್ಲೋರೈಡ್ ಕೂಡಿವೆ ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಮತ್ತು ಈಗಾಗಲೇ ಸ್ಥಾಪಿಸಲಾಗಿರುವ ಘಟಕಗಳ ಸರಿಯಾದ ನಿರ್ವಹಣೆ ಮಾಡಿ ಜನರಿಗೆ ತೊಂದರೆಯಾಗಂದಂತೆ ನೀರು ಪೂರೈಕೆ ಮಾಡಿ. ತಾಲ್ಲೂಕಿನಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ಲೋರೈಡ್ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಜಿಲ್ಲೆಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಸಹಾಯಧನ ಯೋಜನೆಯಡಿ ಈ ವರ್ಷ ರೂ.50 ಕೋಟಿ ಮೀಸಲಿರಿಸಲಾಗಿದೆ. ಆದರಲ್ಲಿ ಜಗಳೂರು ತಾಲ್ಲೂಕಿಗೆ ರೂ.5 ಕೋಟಿ ಅನುದಾನ ನೀಡಲಾಗುತ್ತಿದೆ. ಮತ್ತು ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಬೇಡಿಕೆಗೆ ಅನುಸಾರವಾಗಿ ಒದಗಿಸಲಾಗುತ್ತದೆ. ಯಾವುದೇ ಅನುದಾನದ ಕೊರತೆ ಇರುವುದಿಲ್ಲ ಎಂದರು.

ಬರ ಹಿನ್ನೆಲೆಯಲ್ಲಿ ಜನರಿಗೆ ಹೆಚ್ಚಿನ ಉದ್ಯೋಗ ನೀಡಬೇಕಾಗಿದೆ. ಪ್ರತಿ ಕುಟುಂಬಕ್ಕೆ ಈಗಿರುವ 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆಯಾಗಿಲ್ಲ. ಆದರೂ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಖಾತರಿ ಕೆಲಸಗಳನ್ನು ಕೈಗೆತ್ತಿಕೊಳ್ಳಿ. ಬಿಸ್ತುವಳ್ಳಿ, ದೇವಿಕೆರೆ, ಗುರುಸಿದ್ದಾಪುರ, ಹನುಮಂತಪುರ, ಇಲ್ಲಿ ಶೇ25 ಕ್ಕಿಂತ ಕಡಿಮೆ ಉದ್ಯೋಗ ಖಾತರಿ ಕೆಲಸ ಮಾಡಲಾಗಿದೆ. ಇದರ ಪ್ರಗತಿಯನ್ನು ತಕ್ಷಣವೇ ಕೈಗೊಳ್ಳಿ ಎಂದು ಸೂಚಿಸಿದರು.
ಜಗಳೂರು ತಾಲ್ಲೂಕಿನಲ್ಲಿ 409 ಮೀ.ಮೀ ವಾಡಿಕೆಗೆ 361 ಮೀ.ಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಮಾತ್ರ ಹೆಚ್ಚು ಮಳೆಯಾಗಿದ್ದು, ಆಗಸ್ಟ್, ಸೆಪ್ಟೆಂಬರ್ನಲ್ಲಿ ಮಳೆ ತೀವ್ರ ಕೊರತೆಯಿಂದ ಶೇ.80 ರಷ್ಟು ಬೆಳೆ ನಷ್ಟವಾಗಿದೆ. ಈ ವರ್ಷ 18,250 ರೈತರು ಫಸಲ್ ಭೀಮಾ ಯೋಜನೆಗೆ ನೊಂದಾಯಿಸಿದ್ದಾರೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಎಸ್.ಎಸ್.ಮಲ್ಲಿಕಾರ್ಜುನ್, ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಬಂದಾಗ ಎನ್ಡಿಆರ್ಎಫ್ ಮಾರ್ಗಸೂಚಿನ್ವಯ ರೂ.259 ಕೋಟಿ ಬೆಳೆ ನಷ್ಟ ವರದಿಯನ್ನು ನೀಡಲಾಗಿದೆ. ತತ್ಕ್ಷಣವೇ ಕೇಂದ್ರದಿಂದ 38 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕಾಗಿದೆ. ಬೆಳೆವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರ ಸಿಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಟಾಸ್ಕ್ ಪೋರ್ಸ್ನಡಿ ಶಾಸಕರು ಸೂಚಿಸುವ ಗ್ರಾಮಗಳಿಗೆ ತಕ್ಷಣವೇ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ತಾಲ್ಲೂಕಿನ 168 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 472 ಕೋಟಿ.ರೂಗಳಿಗೆ ಯೋಜನೆ ತಯಾರಿಸಿದ್ದು ಅನುಮೋದನೆಯ ಹಂತದಲ್ಲಿ ಇದೆ ಎಂದು ತಿಳಿಸಿದರು.

ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 63 ಕೊಳವೆ ಬಾವಿಗಳು ಮತ್ತು ಶಾಂತಿ ಸಾಗರ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಸಚಿವರು ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ 38,024 ಗೃಹ ಲಕ್ಷ್ಮೀ ಫಲನುಭವಿಗಳಿಗೆ ಮಾಸಿಕ ರೂ.2000 ಪಾವತಿಸಲಾಗಿದೆ. ಆದರೆ 1106 ಫಲಾನುಭವಿಗಳಿಗೆ ಆಧಾರ್ ಲಿಂಕ್ ಆಗದ ಕಾರಣ ಪಾವತಿಯಾಗಿರುವುದಿಲ್ಲ. ಇವರಿಗೆ ಆಧಾರ್ ಲಿಂಕ್ ಮಾಡಿಸಿ ಯೋಜನೆಯನ್ನು ತಲುಪಿಸಲು ಸೂಚನೆ ನೀಡಿದರು.

ಶಾಸಕ ಬಿ.ದೇವೆಂದ್ರಪ್ಪ ಮಾತಾನಾಡಿ, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆ ಇದ್ದ ಕಡೆ ತುರ್ತು ಕ್ರಮಗಳು ಆಗಬೇಕು. ಮುಂದಿನ ದಿನಗಳಲ್ಲಿ ನೀರಿನ ಅಭಾವ ಆಗುತ್ತದೆ. ಹೊಸ ಕೊಳವೆ ಬಾವಿ ಸಫಲತೆ ಶೇ.50ಕ್ಕೆ ಇಳಿದಿದೆ. ಅಗತ್ಯವಿದ್ದಲ್ಲಿ ಖಾಸಗಿ ಕೊಳವೆ ಬಾವಿ ಗುರಿತಿಸಿಟ್ಟುಕೊಳ್ಳಲು ತಿಳಿಸಿ, ಇತ್ತಿಚೀನ ದಿನಗಳಲ್ಲಿ ಬರದ ಜೊತೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ, ಅವರ ಮೊಬೈಲ್ ಸ್ವಿಚ್ ಆಪ್ ಆಗಿರುತ್ತದೆ. ತಮ್ಮ ಕಾರ್ಯವೈಕರಿಯನ್ನು ಸರಿಪಡಿಸಿಕೊಳ್ಳದಿದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳುವ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ., ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್, ಅಪಾರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply