ಬೆಂಗಳೂರು: ಕಟ್ಟಡ ಮತ್ತು ಗೃಹ ನಿರ್ಮಾಣಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಭಾರತೀಯ ಜನತಾ ಪಾರ್ಟಿಯ ಬೆಂಗಳೂರು ಮಹಾನಗರದ ವತಿಯಿಂದ ಅಭಿನಂದನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದ್ದು, ಪರಾಗ್ ಹೋಟೆಲ್ ಸಭಾಂಗಣದಲ್ಲಿ ಬಿ.ಜೆ.ಪಿ.ರಾಜ್ಯ ಪ್ರಧಾನ ಕಾರ್ಯದರ್ಶಿದ ಅಶ್ವಥನಾರಾಯಣ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಕಟ್ಟೆ ಸತ್ಯನಾರಾಯಣ್, ಹಾಗೂ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ವಕ್ತಾರ ಬಿ.ವಿ.ಗಣೇಶ್ ರವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಭಾಗವಹಿಸಿದ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಓಸಿ ಹೊಂದಿರಬೇಕು ಎಂಬ ಆದೇಶ ಜಾರಿಗೆ ತಂದಿದ್ದರು. ಈ ಆದೇಶದಿಂದ ಸಾವಿರಾರು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ದೊರೆಯದೆ ಸರ್ಕಾರಕ್ಕೆ ಸರಿಸುಮಾರು 500 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿತ್ತು. ಸಾಲಸೋಲ ಮಾಡಿ ಕಟ್ಟಡ ನಿರ್ಮಿಸಲು ಓ.ಸಿ. ಪಡೆಯಲು ಸಾಧ್ಯವಾಗದ ನೂರಾರು ಮಾಲೀಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಇಂತಹ ಕಾಂಗ್ರೆಸ್ ನ ಜನ ವಿರೋಧಿ ನೀತಿಯಿಂದಾಗಿ ಲಕ್ಷಾಂತರ ಮಂದಿಗೆ ಅನ್ಯಾಯವಾಗಿತ್ತು ಮಾತ್ರವಲ್ಲದೆ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿತ್ತು ಎಂದು ಆರೋಪಿಸಿದರು.
ಈ ನಿಯಮವನ್ನು ರದ್ದುಗೊಳಿಸುವಂತೆ ಇಂಧನ ಸಚಿವರಿಗೆ ಬಿಜೆಪಿ ವತಿಯಿಂದ ಮನವಿ ಕೊಟ್ಟಿದ್ದೆವು, ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರು ವಿದ್ಯುತ್ ಸಂಪರ್ಕಕ್ಕೆ ಓಸಿ ಕಡ್ಡಾಯವೆಂಬ ಆದೇಶ ರದ್ದುಗೊಳಿಸಿದ ನಿರ್ಧಾರ ರಾಜ್ಯಪತ್ರದ ಮೂಲಕ ಇಂದಿನಿಂದಲೇ ಜಾರಿಗೆ ಬಂದಿದೆ ಎಂದರು.
ಸರ್ಕಾರದ ಈ ನಿರ್ಧಾರದಿಂದ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ನೂರಾರು ಮಂದಿ ವಿದ್ಯುತ್ ಸಂಪರ್ಕ ಪಡೆಯಲು ಸಹಕಾರಿಯಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಬಿಲ್ಡರ್ ಗಳು ಬೆಸ್ಕಾಂ ಅಧಿಕಾರಿಗಳಿಗೆ ಲಂಚ ನೀಡುವಂತಹ ಸನ್ನಿವೇಶಕ್ಕೂ ಸರ್ಕಾರದ ಈ ಆದೇಶದಿಂದ ಕಡಿವಾಣ ಬಿದ್ದಂತಾಗಿದೆ ಈ ಐತಿಹಾಸಿಕ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು.




